ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಮಂಗಳೂರು: ಡ್ರಗ್ಸ್ ದಂಧೆ ವಿರುದ್ಧ ಕಮಿಷನರೇಟ್ ಪೊಲೀಸರ ಸಮರ; MDMA, ಗಾಂಜಾ ಮಾರುತ್ತಿದ್ದ ಇಬ್ಬರು ಸೆರೆ! ಆಟೋದಲ್ಲಿ ಮಾದಕ ವಸ್ತು ಮಾರುತ್ತಿದ್ದ ವ್ಯಕ್ತಿ, ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುತ್ತಿದ್ದ ಥೆರಪಿಸ್ಟ್ ಅರೆಸ್ಟ್ – ಲಕ್ಷಾಂತರ ಮೌಲ್ಯದ ಸೊತ್ತು ಜಪ್ತಿ!


ಮಂಗಳೂರು: ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಜಾಲವನ್ನು ಬೇರುಸಹಿತ ಕಿತ್ತೊಗೆಯಲು ಕಾರ್ಯಾಚರಣೆ ತೀವ್ರಗೊಳಿಸಿರುವ ಮಂಗಳೂರು ನಗರ ಪೊಲೀಸರು, ಪ್ರತ್ಯೇಕ ಕಡೆಗಳಲ್ಲಿ ದಾಳಿ ನಡೆಸಿ ಎಂಡಿಎಂಎ (MDMA) ಹಾಗೂ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕ ದ್ರವ್ಯಗಳು, ಕೃತ್ಯಕ್ಕೆ ಬಳಸಿದ್ದ ಆಟೋ ರಿಕ್ಷಾ, ಕೆಟಿಎಂ (KTM) ಬೈಕ್ ಹಾಗೂ ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಪಂಪ್‌ವೆಲ್‌ನಲ್ಲಿ ಆಟೋದಲ್ಲಿ ಎಂಡಿಎಂಎ ಮಾರಾಟ: ಆರೋಪಿ ಲಾಕ್ ಪಂಪ್‌ವೆಲ್‌ನಿಂದ ನಂತೂರು ಕಡೆಗೆ ಸಾಗುವ ಸರ್ವಿಸ್ ರಸ್ತೆಯ ಬದಿಯಲ್ಲಿ ಆಟೋ ರಿಕ್ಷಾದಲ್ಲಿ ಕುಳಿತು ನಿಷೇಧಿತ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ವರ್ತಮಾನ ಕದ್ರಿ (ಮಂಗಳೂರು ಪೂರ್ವ) ಪೊಲೀಸರಿಗೆ ಲಭಿಸಿತ್ತು.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ, ಕೇರಳದ ಮಂಜೇಶ್ವರ ಸಮೀಪದ ವರ್ಕಾಡಿ ನಿವಾಸಿ ಮೊಹಮ್ಮದ್ ಇರ್ಷಾದ್ (30) ಎಂಬಾತನನ್ನು ಬಂಧಿಸಿದ್ದಾರೆ. ಆತನಿಂದ ₹1.36 ಲಕ್ಷ ಮೌಲ್ಯದ 13.69 ಗ್ರಾಂ ತೂಕದ ಎಂಡಿಎಂಎ, ನಗದು ಹಾಗೂ ಆಟೋ ಸೇರಿದಂತೆ ಒಟ್ಟು ₹2.94 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು: ಆಯುರ್ವೇದ ಥೆರಪಿಸ್ಟ್ ಬಂಧನ ಮತ್ತೊಂದು ಪ್ರಕರಣದಲ್ಲಿ, ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಕೇಸ್‌ನಲ್ಲಿ ಸಿಕ್ಕಿಬಿದ್ದಿದ್ದ ಆಶ್ವಿನ್ ಕ್ಸೇವಿಯರ್ ಎಂಬಾತ ನೀಡಿದ ಮಹತ್ವದ ಸುಳಿವಿನ ಆಧಾರದಲ್ಲಿ ಪೊಲೀಸರು ಬೃಹತ್ ಪೆಡ್ಲರ್ ಜಾಲದ ಕೊಂಡಿಯನ್ನು ಪತ್ತೆಹಚ್ಚಿದ್ದಾರೆ. ಕಾಲೇಜು ಯುವಜನತೆ ಹಾಗೂ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಕೇರಳದ ಕಣ್ಣೂರು ಮೂಲದ, ಹಾಲಿ ಮಂಗಳೂರಿನ ಕೊಂಚಾಡಿ ನಿವಾಸಿ ನಿತಿನ್ ಕೃಷ್ಣನ್ (27) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕದ್ರಿ ಪದವು ಮೈದಾನದ ಸಮೀಪದ ಆಯುರ್ವೇದ ಕ್ಲಿನಿಕ್‌ನಲ್ಲಿ ಥೆರಪಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಈತನಿಂದ ₹60 ಸಾವಿರ ಮೌಲ್ಯದ 1.206 ಕೆ.ಜಿ. ಗಾಂಜಾ, ಕೆಟಿಎಂ ಬೈಕ್ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಸುರತ್ಕಲ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಕೇಸ್ ದಾಖಲಾಗಿದ್ದು, ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.