ಮಂಗಳೂರು: ಮೊಬೈಲ್ ಸಿಮ್ ದುರ್ಬಳಕೆ ಮಾಡಿ ನಿವೃತ್ತ ಹಿರಿಯ ನಾಗರಿಕರಿಗೆ 2.12 ಕೋಟಿ ರೂ. ವಂಚನೆ
ಮಂಗಳೂರು: ವೃದ್ಧರೊಬ್ಬರ ಮೊಬೈಲ್ ಸಂಖ್ಯೆಯ ನೆಟ್‌ವರ್ಕ್ ಪ್ರವೇಶವನ್ನು ಅಕ್ರಮವಾಗಿ ನಿಯಂತ್ರಣಕ್ಕೆ ಪಡೆದು, ಅವರ ಐದು ಪ್ರಮುಖ ಬ್ಯಾಂಕ್ ಖಾತೆಗಳಲ್ಲಿದ್ದ 2 ಕೋಟಿ 12 ಲಕ್ಷಕ್ಕೂ ಅಧಿಕ ಮೊತ್ತವನ್ನು ಆನ್‌ಲೈನ್ ಮೂಲಕ ದೋಚಿರುವ ಸೈಬರ್ ವಂಚನೆ ಪ್ರಕರಣ ಮಂಗಳೂರಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ನಗರ ಪೊಲೀಸರ ಪ್ರಕಟಣೆ ತಿಳಿಸಿದೆ.
ಮುಂಬೈನ ಖಾಸಗಿ ಸಂಸ್ಥೆಯೊಂದರಲ್ಲಿ 50 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಸದ್ಯ ಮಂಗಳೂರಿನಲ್ಲಿ ನೆಲೆಸಿರುವ 78 ವರ್ಷದ ಹಿರಿಯ ವ್ಯಕ್ತಿಯೊಬ್ಬರು ಈ ಬೃಹತ್ ವಂಚನೆಗೆ ಬಲಿಯಾಗಿದ್ದಾರೆ.
ಘಟನಾ ವಿವರ: ದೂರುದಾರರು ದಶಕದಿಂದ ಬಳಸುತ್ತಿದ್ದ ವೊಡಾಫೋನ್ ಮೊಬೈಲ್ ಸಂಖ್ಯೆಗೆ ತಮ್ಮ ಉಳಿತಾಯ ಖಾತೆ ಹಾಗೂ ನಿಶ್ಚಿತ ಠೇವಣಿ (ಎಫ್‌ಡಿ) ಖಾತೆಗಳನ್ನು ಜೋಡಿಸಿದ್ದರು. ಜುಲೈ ತಿಂಗಳಲ್ಲಿ ಈ ನಂಬರ್‌ನ ನೆಟ್‌ವರ್ಕ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಕಚೇರಿಗೆ ತೆರಳಿ ವಿಚಾರಿಸಿದಾಗ, ಸದರಿ ಮೊಬೈಲ್ ಸಂಖ್ಯೆಯನ್ನು ಏರ್‌ಟೆಲ್ ಸಂಸ್ಥೆಯವರು ಬೇರೊಬ್ಬರಿಗೆ ನೀಡಿರುವುದು ಗೊತ್ತಾಗಿದೆ. ಕೂಡಲೇ ಅವರು ಆ ನಂಬರ್ ಅನ್ನು ಸ್ಥಗಿತಗೊಳಿಸುವಂತೆ (ಬ್ಲಾಕ್) ಮನವಿ ಸಲ್ಲಿಸಿದ್ದರು.
ಬಳಿಕ ಆಗಸ್ಟ್ 17ರಂದು ಸಂತ್ರಸ್ತರು ತಮ್ಮ ಐಡಿಎಫ್‌ಸಿ ಬ್ಯಾಂಕ್ ಶಾಖೆಗೆ ತೆರಳಿದಾಗ, ಅವರ ಗಮನಕ್ಕೆ ಬಾರದಂತೆ ಖಾತೆಯಿಂದ ಭಾರಿ ಮೊತ್ತದ ಹಣ ವರ್ಗಾವಣೆಯಾಗಿರುವುದು ಬ್ಯಾಂಕ್ ಸಿಬ್ಬಂದಿಯಿಂದ ತಿಳಿದುಬಂದಿದೆ.
5 ಬ್ಯಾಂಕ್ ಖಾತೆಗಳಿಂದ ಹಣ ಕಡಿತ: ತಕ್ಷಣವೇ ತಮ್ಮ ಉಳಿದ ಬ್ಯಾಂಕ್ ಖಾತೆಗಳ ವಹಿವಾಟು ಪರಿಶೀಲಿಸಿದಾಗ, ಐಡಿಎಫ್‌ಸಿ ಜೊತೆಗೆ ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕರ್ನಾಟಕ ಬ್ಯಾಂಕ್ ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕ್ ಖಾತೆಗಳಿಂದಲೂ ಹಂತ ಹಂತವಾಗಿ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಜುಲೈ 16, 2026 ರಿಂದ ಆಗಸ್ಟ್ 18, 2026 ರ ನಡುವಿನ ಅವಧಿಯಲ್ಲಿ ನೆಟ್ ಬ್ಯಾಂಕಿಂಗ್ ಮೂಲಕ ಒಟ್ಟು 2,12,95,500 ರೂಪಾಯಿ ಹಣವನ್ನು ಖದೀಮರು ವರ್ಗಾಯಿಸಿಕೊಂಡಿದ್ದಾರೆ. ಈ ಯಾವುದೇ ವಹಿವಾಟಿಗೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಬ್ಯಾಂಕಿನಿಂದ ಎಸ್‌ಎಂಎಸ್ ಅಥವಾ ಕರೆಗಳು ಬಂದಿರುವುದಿಲ್ಲ.
ಇದೇ ಸಂದರ್ಭದಲ್ಲಿ ಹೇಮಂತ್ ಎಂಬ ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ ಮೂಲಕ ದೂರುದಾರರಿಗೆ ನಿರಂತರವಾಗಿ ಕರೆ ಮಾಡುತ್ತಿದ್ದು, ಖಾತೆಯ ದಾಖಲೆಗಳನ್ನು ಪರಿಶೀಲಿಸಿದಾಗಲೂ ಅದೇ ವ್ಯಕ್ತಿಯ ಖಾತೆಗೆ ಹಣ ಸಂದಾಯವಾಗಿರುವುದು ಪತ್ತೆಯಾಗಿದೆ.
ತಮ್ಮ ಮೊಬೈಲ್ ನಂಬರ್ ನಿಯಂತ್ರಣ ಪಡೆದು ಕೋಟ್ಯಂತರ ರೂಪಾಯಿ ವಂಚಿಸಿರುವ ಸೈಬರ್ ಖದೀಮರ ಜಾಲದ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂತ್ರಸ್ತರು ಮಂಗಳೂರು ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.