ಮಂಗಳೂರು: ಫ್ಯಾಕ್ಟರಿಯಲ್ಲಿ ಕೋಟ್ಯಂತರ ರೂ‌.‌ ಮೌಲ್ಯದ ಕಚ್ಚಾ ಸಾಮಾಗ್ರಿಗಳನ್ನು ಕಳವು ಪ್ರಕರಣ; ನಾಲ್ವರು ಆರೋಪಿಗಳು ಅರೆಸ್ಟ್

ಮಂಗಳೂರು: ನಗರದ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಕಂಪೆನಿಯಿಂದ ಕೋಟ್ಯಂತರ ರೂ. ಮೌಲ್ಯದ ಪ್ಲಾಸ್ಟಿಕ್ ಕಚ್ಚಾ ಸಾಮಗ್ರಿಗಳನ್ನು ಕಳವುಗೈದು ಮಾರಾಟ ಮಾಡಿರುವ ನೌಕರ ಸೇರಿದಂತೆ ಇತರ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಪಣಂಬೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ನಗರದ ಬಿಜೈ ಕಾಪಿಕಾಡು ನಿವಾಸಿ ಮಹೇಶ್ ಕುಲಾಲ್ ಅಲಿಯಾಸ್ ಮಹೇಶ್ ರಘು ಕುಲಾಲ್(38), ಶಕ್ತಿನಗರ ಕ್ಯಾಸಲಿನ ಕಾಲನಿ ರಸ್ತೆ ನಿವಾಸಿ ಅನಂತ ಸಾಗರ(39), ಕಡಂದಲೆ ಪೋಸ್ಟ್ ಪಟ್ಣ ಹೌಸ್ ನಿವಾಸಿ ಸಾಯಿ ಪ್ರಸಾದ್ (35), ಚೆನ್ನೈ ಎಂ.ಕೆ.ಬಿ. ನಗರ ಮೂಲದ ಕಿರಣ್ ಸಮಾನಿ(53) ಬಂಧಿತ ಆರೋಪಿಗಳು.

ಬೈಕಂಪಾಡಿಯ ಬ್ರೈಟ್ ಪ್ಯಾಕೆಜಿಂಗ್ ಪ್ರೈ.ಲಿ. ಎಂಬ ಕಂಪೆನಿಗೆ ಅಗತ್ಯವಿರುವ Polypropylene ಕಚ್ಚಾ ಸರಕುಗಳನ್ನು ತರಿಸಲಾಗುತ್ತಿದೆ. ಆದರೆ ಈ ಕಂಪೆನಿಯಲ್ಲಿ ಸ್ಟೋರ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ಮಹೇಶ್ ಕುಲಾಲ್ ಎಂಬಾತ ಪೋರ್ಜರಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು 2019ರ ಡಿಸೆಂಬರ್ ನಿಂದ 2022 ಜನವರಿವರೆಗೆ 36 ಟ್ರಕ್ ಗಳಲ್ಲಿ ಬಂದಿರುವ ಕೋಟ್ಯಂತರ ರೂ. ಮೌಲ್ಯದ Polypropylene ಕಚ್ಚಾ ಸರಕುಗಳನ್ನು ಸ್ವೀಕೃತಿಗೊಂಡಂತೆ ಮಾಡಿ ಕಳವುಗೈದಿದ್ದಾನೆ. ಈ ಕಚ್ಚಾ ಸರಕುಗಳನ್ನು ಮಹೇಶ್ ಕುಲಾಲ್ ತನ್ನ ಸ್ನೇಹಿತ ಅನಂತ ಸಾಗರ್ ಎಂಬಾತನಿಗೆ ನೀಡಿದ್ದಾನೆ. ಆತ ಈ ಕಚ್ಚಾ ಸರಕುಗಳನ್ನು ತಾನು ಕೆಲಸ ಮಾಡುವ ಬೈಕಂಪಾಡಿಯ ವಿಧಿ ಎಂಟರ್ ಪ್ರೈಸಸ್ ನ ಹೆಸರಿನಲ್ಲಿ ನಕಲಿ ಬಿಲ್ಲುಗಳನ್ನು ಮಾಡಿ ಬೆಂಗಳೂರಿನ ಹೆಚ್.ಎಸ್.ಪಾಲಿಮಾರ್ ನ ಆರೋಪಿ ಕಿರಣ್ ಸಾಮಾನಿ ಎಂಬಾತನಿಗೆ ಮಾರಾಟ ಮಾಡಿದ್ದಾನೆ.


ಆರೋಪಿಗಳು ಕೋಟ್ಯಂತರ ರೂ. ಮೌಲ್ಯದ 36 ಲೋಡ್ 840 ಟನ್ Polypropylene ಕಚ್ಚಾ ಸರಕುಗಳನ್ನು ಕಂಪೆನಿಗೆ ಗೊತ್ತಿಲ್ಲದೆ ಕಳವು ಮಾಡಿ ಮಾರಾಟ ಮಾಡಿರುತ್ತಾರೆ. ಈ ಬಗ್ಗೆ ಬಂದಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಪೊಲೀಸ್ ಹಾಗೂ ಪಣಂಬೂರು ಪೊಲೀಸರು ಜಂಟಿಯಾಗಿ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಆರು ಮೊಬೈಲ್ ಪೋನ್ ಗಳು, 4 ಲ್ಯಾಪ್ ಟಾಪ್ ಗಳು, 1 ಕಂಪ್ಯೂಟರ್, ಮಹೇಶ್ ಕುಲಾಲ್ ನ ಹುಂಡೈ ಕಂಪೆನಿಯ ಕಾರು, ರೆನಾಲ್ಡ್ ಕಾರು, ಅನಂತ ಸಾಗರ್ ನ ಸೆಲ್ಟೋಸ್ ಕಾರು, ಟಾಟಾ ಕಂಪೆನಿಯ ಲಾರಿಯೊಂದನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ವಶಪಡಿಸಿಕೊಂಡ ಸೊತ್ತಿನ ಮೌಲ್ಯ 74 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಆರೋಪಿ ಮಹೇಶ್ ಕುಲಾಲ್ ಕಳವುಗೈದಿರುವ ಹಣದಲ್ಲಿ  ಮಂಗಳೂರಿನ ವಿವಿಧೆಡೆ ಜಮೀನು ಖರೀದಿ ಮಾಡಿದ್ದಲ್ಲದೆ ಐಷಾರಾಮಿ ಕಾರುಗಳನ್ನು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದನು. ಅಲ್ಲದೆ ತನ್ನ ಪತ್ನಿಯ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಹಣ ಠೇವಣಿ ಇರಿಸಿ, ಇನ್ಸೂರೆನ್ಸ್, ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿರುತ್ತಾನೆ. ಅಲ್ಲದೆ ಪತ್ನಿಯ ಹೆಸರಿನಲ್ಲಿ ನಗರದ 3 ಕಡೆಗಳಲ್ಲಿ ಐಷಾರಾಮಿ ಸೆಲೂನ್ ಗಳನ್ನು ಹೊಂದಿರುತ್ತಾನೆ. ಅನಂತ ಸಾಗರ್ ಐಷಾರಾಮಿ ಮನೆಯನ್ನು ಕಟ್ಟಿಸಿ ಐಷಾರಾಮಿ ಕಾರನ್ನು ಖರೀದಿ ಮಾಡಿ ಐಶಾರಾಮಿ ಜೀವನ ಸಾಗಿಸುತ್ತಿದ್ದನು. 
BREAKING NEWS
Loading latest news...
Join our WhatsApp Channel Powered By : Online Pudu