ಮಂಗಳೂರು: ಸರಕು ಸಾಗಾಟದ ಮೂರು ಬೋಟ್ ಗಳಲ್ಲಿನ ಬೆಂಕಿ ಅವಘಡದಲ್ಲಿ 2.50 ಕೋಟಿ ರೂ.‌ನಾಶ - ನಷ್ಟ


ಮಂಗಳೂರು: ನಗರದ ಕಸಬಾ ಬೆಂಗ್ರೆಯಲ್ಲಿ ಶುಕ್ರವಾರ ಸಂಭವಿಸಿರುವ ಬೆಂಕಿ ಅವಘಡದಲ್ಲಿ ಲಕ್ಷದ್ವೀಪಕ್ಕೆ ಸರಕು ಸಾಗಿಸುತ್ತಿದ್ದ ಮೂರು ಬೋಟ್ ಗಳು ಸುಟ್ಟು ಕರಕಲಾಗಿದ್ದು, ಸುಮಾರು 2.50 ಕೋ.ರೂ. ನಾಶ ನಷ್ಟವಾಗಿದೆ ಎಂದು ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ದುರಸ್ತಿಗೆಂದು ನಿಲ್ಲಿಸಿದ್ದ ಈ ಬೋಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿತ್ತು‌. ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ ಪರಿಣಾಮ ಪಕ್ಕದಲ್ಲಿದ್ದ ಇತರ ಎರಡು ಸಣ್ಣ ಹಡಗಳಿಗೂ ಬೆಂಕಿ ಆವರಿಸಿತ್ತು. ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿ ವರ್ಗ ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿತ್ತು. 

ಈ ದುರ್ಘಟನೆಯಿಂದ ಮುಹಮ್ಮದ್ ರಫೀಕ್ ಎಂಬವರಿಗೆ ಸೇರಿದ್ದ ಮನೆ ಹಾಗೂ ಅಬ್ದುಸ್ಸಮದ್‌ಗೆ ಸೇರಿದ ಒಣಮೀನು ದಾಸ್ತಾನಿಡುವ ಶೆಡ್‌ಗೂ ಹಾನಿಯಾಗಿತ್ತು. ಪರಿಣಾಮ ಒಟ್ಟು 2.50 ಕೋ.ರೂ. ನಷ್ಟವಾಗಿದೆ ಎಂದು ಹಡಗು ರಿಪೇರಿ ಯಾರ್ಡ್‌ನ ವಾಚ್‌ಮ್ಯಾನ್ ಮುಹಮ್ಮದ್ ಶರೀಫ್ ಪಣಂಬೂರು ಪೊಲೀಸರಿಗೆ ದೂರು ನೀಡಿದ್ದಾರೆ.