ಡಬಲ್ ಎಂಜಿನ್ ಸರ್ಕಾರದಿಂದ ನಿರ್ಲಕ್ಷಿತರ ಏಳಿಗೆ - ಪ್ರಧಾನಿ ಮೋದಿ ( Video)



ರೂ. 3,800 ಕೋಟಿ ಮೊತ್ತದ 8 ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ

ಮಂಗಳೂರು: ರಾಜ್ಯ ಮತ್ತು ಕೇಂದ್ರದ ಡಬಲ್ ಎಂಜಿನ್ ಸರ್ಕಾರ ನಿರ್ಲಕ್ಷಿತರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಅಭಿವೃದ್ಧಿಯ ಲಾಭ ಅವರಿಗೂ ಸಿಗುವಂತಾಗಲು ಹಗಲಿರುಳೂ ಶ್ರಮಿಸುತ್ತಿದೆ, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. 




ಶುಕ್ರವಾರ, ನಗರದ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ರೂ. 3,800 ಕೋಟಿ ಮೊತ್ತದ 8 ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಂದರುಗಳ ಸಾಮರ್ಥ್ಯ ವೃದ್ಧಿಗೆ ವಿಶೇಷ ಗಮನ ನೀಡುತ್ತಿದ್ದು, ಕಳೆದ ಎಂಟು ವರ್ಷಗಳಲ್ಲಿ ಬಂದರುಗಳ ಸಾಮರ್ಥ್ಯ ಎರಡು ಪಟ್ಟಾಗಿದೆ. ಈ ಮೂಲಕ ಅಂತಾರಾಷ್ಟ್ರೀಯ ಗುಣಮಟ್ಟದ ರೈತರ ಮತ್ತು ಮೀನುಗಾರರ ಉತ್ಪನ್ನಗಳಿಗೆ ವಿದೇಶೀ ಮಾರುಕಟ್ಟೆ ಒದಗಿಸಲು ಸಾಧ್ಯ. ಮೇಕ್ ಇನ್ ಇಂಡಿಯಾ ಕಲ್ಪನೆ ವಿಸ್ತರಿಸಿದರೆ ಮಾತ್ರ ವಿಕಸಿತ ಭಾರತ ನಿರ್ಮಾಣ ಸಾಧ್ಯ, ಎಂದರು.  

ʼಗ್ರೀನ್ ಗ್ರೋತ್, ಗ್ರೀನ್ ಜಾಬ್ʼ ಪರಿಕಲ್ಪನೆಯಲ್ಲಿ ಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ʼಭಾರತಮಾಲಾʼ ಯೋಜನೆ ಮೂಲಕ ರಸ್ತೆ ಮತ್ತು ʼಸಾಗರಮಾಲಾʼ ಮೂಲಕ ಬಂದರುಗಳ ಅಭಿವೃದ್ಧಿ ನಡೆದಿದೆ. ರಫ್ತು ಹೆಚ್ಚಳ, ಸಂಸ್ಕರಣಾಗಾರಗಳ ಅಬೀವೃದ್ಧಿಯಿಂದ ಕರ್ನಾಟಕಕ್ಕೆ ಹೆಚ್ಚಿನ ಲಾಭವಾಗಿದೆ. ರೈಲ್ವೇ ಬಜೆಟ್ ನಲ್ಲಿ ಕರ್ನಾಟಕದ ಪಾಲು ನಾಲ್ಕು ಪಟ್ಟು ಹೆಚ್ಚಿದೆ, ರೈಲ್ವೇ ಲೇನ್ಗಳಿಗೆ ವಿದ್ಯುತ್ ಒದಗಿಸಲೂ ವಿಶೇಷ ಗಮನ ಹರಿಸಲಾಗಿದೆ, ಎಂದರು. ಹೊಸ ಯೋಜನೆಗಳಿಂದಲೂ ಕರ್ನಾಟಕಕ್ಕೆ ವಿಶೇಷ ಅನುಕೂಲವಾಗಲಿದೆ, ಎಂದರು. 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಧುನಿಕ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುತ್ತಿದ್ದು, ಮೆಟ್ರೋ ಮೂಲಕ ಜೋಡಣೆಯಾದ ನಗರಗಳ ಸಂಖ್ಯೆ ಕಳೆದ 8 ವರ್ಷಗಳಲ್ಲಿ ನಾಲ್ಕು ಪಟ್ಟಾಗಿದೆ. ಉಡಾನ್ ದೇಶೀಯ ವಿಮಾನಯಾನ ಯೋಜನೆ ಅದ್ಭುತ ಯಶಸ್ಸು ಗಳಿಸಿದೆ. ಗ್ರಾಮ ಪಂಚಾಯತ್ಗಳನ್ನು ಇಂಟರ್ನೆಟ್ ಮೂಲಕ ಜೋಡಿಸುವ ಕೆಲಸ ಮುಂದುವರಿದಿದ್ದು, 5 ಜಿ ಮುಂದಿನ ದಿನಗಳಲ್ಲಿ ಹೊಸ ಕ್ರಾಂತಿಗೆ ಕಾರಣವಾಗಲಿದೆ, ಎಂದರಲ್ಲದೆ, ಕರ್ನಾಟಕದ ಕರಾವಳಿಗಳಲ್ಲಿ ಕ್ರೂಸ್ ಪ್ರವಾಸೋದ್ಯಮ ಬೆಳೆಸಲು ಸರ್ಕಾರಗಳು ಮುಂದಾಗಿವೆ, ಎಂದರು. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕರಾವಳಿಯ ಮೂಲಕ ಸಮಗ್ರ ಕರ್ನಾಟಕದ ಅಭಿವೃದ್ಧಿಯಾಗುತ್ತಿದೆ. ಸಿಆರ್ಜೆಡ್ ನ ಲಾಭ ಹಿಂದೆ ಕೇರಳ ಮತ್ತು ಗೋವಾಗಳಿಗೆ ಮಾತ್ರ ಆಗುತ್ತಿತ್ತು. ಆದರೆ ಈ ಬಾರಿ ಕೇಂದ್ರ ಸರ್ಕಾರ, ಕರ್ನಾಟಕದ ಮಾಸ್ಟರ್ ಪ್ಲಾನ್ಗೆ ಒಪ್ಪಿಗೆ ನೀಡಿದೆ. ಮಂಗಳೂರು ಮತ್ತು ಕಾರವಾರ ಬಂದರುಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಕಾಳಜಿ ವಹಿಸಲಾಗಿದೆ. ಸುಮಾರು 2 ಲಕ್ಷ ಮೀನುಗಾರರಿಗೆ ʼವಿದ್ಯಾ ನಿಧಿʼ ಯೋಜನೆಯ ಲಾಭ ಪಡೆದಿದ್ದು, ರೂ. 64 ಕೋಟಿ ವೆಚ್ಚದಲ್ಲಿ 5000 ಮನೆಗಳನ್ನು ನಿರ್ಮಿಸಲಾಗಿದೆ. ಮೀನುಗಾರಿಕಾ ಸಂಸ್ಥೆಯ ರಚನೆಯಾಗಲಿದ್ದು, ಡಬಲ್ ಎಂಜಿನ್ ಸರ್ಕಾರ ಭಾರತಕ್ಕೇ ನೆರವಾಗಲಿದೆ, ಎಂದರು.   

ಇದೇ ವೇಳೆ ಹೊಸ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ಮೋದಿ, ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಇತರ ಯೋಜನೆಗಳ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಚೆಕ್ ವಿತರಿಸಿದರು. ಪ್ರಧಾನಿಯನ್ನು ಶ್ರೀಕೃಷ್ಣ ಹಾಗೂ ಪರಶುರಾಮರ ಲೋಹದ ವಿಗ್ರಹಗಳು, ಸಾಂಪ್ರದಾಯಿಕ ಪೇಟ, ಶಾಲು, ಮಲ್ಲಿಗೆಯ ಹಾರಗಳ ಮೂಲಕ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರದ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಬಂದರು, ಹಡಗು ಮತ್ತು ಜಲಸಾರಿಗೆ ಹಾಗೂ ಆಯುಷ್ ಸಚಿವ ಸರ್ಬಾನಂದ್ ಸೋನೋವಾಲ್, ಇಂಧನ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಬಂದರು, ಹಡಗು ಮತ್ತು ಜಲಸಾರಿಗೆ ರಾಜ್ಯ ಸಚಿವರಾದ ಶ್ರೀಪಾದ್ ಯೆಸ್ಸೋ ನಾಯಕ್  ಹಾಗೂ ಶಂತನು ಠಾಕೂರ್ ಮೊದಲಾದವರು ಉಪಸ್ಥಿತರಿದ್ದರು.  


ಜನಸಾಗರ…ಸಾಲದ ಜಾಗ 
ಮೋಡ ಕವಿದ ವಾತಾವರಣ ಮತ್ತು ಭಾರೀ ಭದ್ರತೆಯ ನಡುವೆಯೂ ಸಮಾರಂಭಕ್ಕೆ ಭಾರೀ ಜನಸಾಗರ ಹರಿದುಬಂತು. ನೂರಾರು ಜನರಿಗೆ ಜಾಗ ಸಾಲದೆ, ಹೊರಗೇ ಪ್ರಧಾನಿಗಳ ಆಗಮನವನ್ನು ನೋಡಿ ಕಣ್ತುಂಬಿಕೊಂಡರು.  ಬೃಹತ್ ವೇದಿಕೆಯಡಿ ಹಲವು ಎಲ್ ಇ ಡಿ ಪರದೆಗಳನ್ನು ಜೋಡಿಸಿದ್ದರಿಂದ ಮತ್ತು ವಾಹನ ನಿಲುಗಡೆ, ಆಹಾರ- ನೀರು ಹಂಚಲು ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದರಿಂತ ಯಾವುದೇ ಅನಾನುಕೂಲವಾಗಲಿಲ್ಲ. ಕೇಸರಿ ಶಾಲುಗಳನ್ನು ಧರಿಸಿದ್ದ ಬಿಜೆಪಿ ಕಾರ್ಯಕರ್ತರಿಂದ ಸಭಾಂಗಣ ಕೇಸರಿಮಯವಾಗಿತ್ತು. ಭಾರೀ ಘೋಷಣೆಗಳು, ಚುರುಕಾಗಿ ಓಡಾಡಿಕೊಂಡಿದ್ದ ಸ್ಥಳೀಯ ಸಚಿವರು, ಸಂಸದರು ಗಮನ ಸೆಳೆದರು. 


ಆಯುಷ್ಮಾನ್ ಯೋಜನೆ 
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿ ಆಯುಷ್ಮಾನ್ ಯೋಜನೆಯಿಂದ ಆದ ಲಾಭವನ್ನು ವಿಶೇಷವಾಗಿ ಉಲ್ಲೇಖಿಸಿದರು. ದೇಶದಲ್ಲಿ ಸುಮಾರು ನಾಲ್ಕು ಕೋಟಿ ಬಡವರು ಯೋಜನೆ ಲಾಭ ಪಡೆದಿದ್ದು, ಸುಮಾರು ರೂ. 15,000 ಕೋಟಿ ಬಡವರ ಹಣ ಉಳಿದಿದೆ. ಕರ್ನಾಟಕದಲ್ಲೂ 30 ಲಕ್ಷ ಜನರು ಯೋಜನೆಯ ಲಾಭ ಪಡೆದಿದ್ದು, ರೂ. 4000 ಕೋಟಿಯಷ್ಟು ಬಡವರ  ಹಣ ಉಳಿದಿದೆ, ಎಂದರು. 


 ಕೋವಿಡ್ ಕಾಲದ ನೀತಿಗಳಿಂದ ಲಾಭ 
ಕೋವಿಡ್ ಸಾಂಕ್ರಮಿಕದ ಕಾಲದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿಲುವಿನಿಂದ ಆರ್ಥಿಕ ಅವಘಡ ತಪ್ಪಿದೆ ಎಂದು ಮೋದಿ ಸರ್ಕಾರದ ಕ್ರಮಗಳನ್ನು ಸಮರ್ಥಿಸಿಕೊಂಡರು. ರಫ್ತಿನಲ್ಲಿ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, ಸೇವಾವಲಯ, ಉತ್ಪಾದನಾ ವಲಯಗಳಲ್ಲಿ ಸಾಕಷ್ಟು ಅಭಿವೃದ್ಇಯಾಗಿದೆ, ಎಂದರು. ಮೊಬೈಲ್ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆ ಹೆಚ್ಚಿದ್ದು, ರಫ್ತು ಹೆಚ್ಚಿರುವುದರಿಂದ ಕರಾವಳಿಗರಿಗೆ ಲಾಭವಾಗಿದೆ, ಎಂದರು. 
 
ಅಬ್ಬಕ್ಕ, ಚೆನ್ನಮ್ಮನ ನೆನಪು…
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ರಾಣಿ ಅಬ್ಬಕ್ಕ ಅವರನ್ನು ವಿಶೇಷವಾಗಿ ನೆನಪಿಸಿಕೊಂಡರು. ನಾವು ಗುಲಾಮಗಿರಿಯಿಂದ ಹೊರಬರಲು ಅವರು ಮಾಡಿದ ತ್ಯಾಗ ಅನನ್ಯ. ಅವರು ಹಾಕಿಕೊಟ್ಟ ಶ್ರೀಮಂತ ಪರಂಪರೆ ಮುಂದುವರಿದಿದೆ. ದೇಶಭಕ್ತಿ, ವಿಕಾಸದಲ್ಲಿ ಕರಾವಳಿ ಮುಂದಿದೆ, ಎಂದು ಶ್ಲಾಘಿಸಿದರು. 


//