ನವದೆಹಲಿ: ಉತ್ತರಪ್ರದೇಶದ ಜ್ಞಾನವಾಪಿ ಮಸೀದಿ ವಿವಾದ ಪ್ರಕರಣದಲ್ಲಿ ಹಿಂದೂಗಳ ಮನವಿಗೆ ಕೋರ್ಟ್ ನಿಂದ ಜಯ ದೊರಕಿದೆ. ಮಸೀದಿಯ ಸಂಕೀರ್ಣದಲ್ಲಿರುವ ದೇವರುಗಳಿಗೆ ಪೂಜಿಸುವ ಹಕ್ಕಿನ ಕುರಿತಂತೆ ಸಲ್ಲಿಸುವ ಬಗ್ಗೆ ಹಿಂದೂಗಳ ಮನವಿಯನ್ನು ವಾರಾಣಸಿ ನ್ಯಾಯಾಲಯ ಪುರಸ್ಕರಿಸಿದೆ.
ಇಲ್ಲಿನ ದೇವರ ಪೂಜೆ ನಿರ್ವಹಣೆ ಕುರಿತಂತೆ ಐವರು ಹಿಂದೂ ಮಹಿಳೆಯರು ದಾಖಲಿಸಿದ್ದ ಪ್ರಕರಣವನ್ನು ಪ್ರಶ್ನಿಸಿ, ಮುಸ್ಲಿಮರು ಮನವಿ ಸಲ್ಲಿಸಿದ್ದರು. ಸೋಮವಾರ ಜಿಲ್ಲಾ ನ್ಯಾಯಾಧೀಶ ಅಜಯ್‌ಕೃಷ್ಣ ವಿಶ್ವಾಸ್ ಈ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು, ಹಿಂದೂಗಳ ಮನವಿಯನ್ನು ಎತ್ತಿಹಿಡಿಯುವ ಮೂಲಕ ಮುಸ್ಲಿಮರ ಅರ್ಜಿಯನ್ನು ತಳ್ಳಿ ಹಾಕಿದ್ದಾರೆ. ಈ ಮೂಲಕ ಅಂಜುಮಾನ್ ಇಸ್ಲಾಮಿಯಾ ಕಮಿಟಿ ಪ್ರಶ್ನೆ ಮಾಡಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ. ಪರಿಣಾಮ ಮಸೀದಿಯ ಸಂಕೀರ್ಣದ ಹೊರ ಆವರಣದಲ್ಲಿರುವ ಶೃಂಗಾರ ಗೌರಿ ಮಾತೆಯ ದರ್ಶನಕ್ಕೆ ಅವಕಾಶ ಕೋರಿ ಐವರು ಭಕ್ತರ ಮನವಿಗೆ ಪುರಸ್ಕಾರ ಸಿಕ್ಕಂತಾಗಿದೆ.
ಹಿಂದೂ ದೂರುದಾರರು ಸಲ್ಲಿಸಿರುವ ಮನವಿ ಪ್ಲೇಸಸ್ ಆಫ್ ವರ್ಷಿಪ್ ಆ್ಯಕ್ಟ್ ಉಲ್ಲಂಘನೆ ಆಗುವಂತಿಲ್ಲ ಎಂದು ನ್ಯಾಯಾಧೀಶಎ.ಕೆ.ವಿಶ್ವಾಸ್ ಹೇಳಿದ್ದಾರೆ. ಅಲ್ಲದೆ ಈ ಹಿಂದಿನ ವಿಚಾರಣೆ ವೇಳೆ ಉಲ್ಲೇಖಿಸಲ್ಪಟ್ಟಂತೆ ಅಲ್ಲಿ ಪತ್ತೆಯಾದ ಶಿವಲಿಂಗ ಹಲವಾರು ವರ್ಷಗಳಷ್ಟು ಹಳೆಯದಾಗಿದ್ದಲ್ಲಿ ಪ್ಲೇಸಸ್ ಆಫ್ ವರ್ಷಿಪ್ ಆ್ಯಕ್ಟ್ ಅನ್ವಯಿಸುವುದಿಲ್ಲ. ಇದನ್ನು ನ್ಯಾಯಾಲಯದ ಮುಂದೆ ಇಡಲಾಗುವುದು ಎಂದು ವಕೀಲ ವಿಷ್ಣು ಜೈನ್ ತಿಳಿಸಿದ್ದಾರೆ.