ಭಯೋತ್ಪಾದಕ ದಾವೂದ್ ಇಬ್ರಾಹಿಂ ಮಾಹಿತಿ ನೀಡಿದರೆ 25 ಲಕ್ಷ ರೂ. ಬಹುಮಾನ: ಎನ್ಐಎ ಘೋಷಣೆ

ಹೊಸದಿಲ್ಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)‌ ಭಯೋತ್ಪಾದಕ ದಾವೂದ್ ಇಬ್ರಾಹಿಂನ ಹೊಸ ಫೋಟೋವನ್ನು ಬಿಡುಗಡೆ ಮಾಡಿ, ಆತನ ಬಗ್ಗೆ ಮಾಹಿತಿ ನೀಡಿದವರಿಗೆ 25 ಲಕ್ಷ ರೂ. ಬಹುಮಾನ ನೀಡುವುದಾಗಿ  ಘೋಷಣೆ ಮಾಡಿದೆ. ಅಲ್ಲದೆ ದಾವೂದ್ ಇಬ್ರಾಹಿಂನ ಸಹಚರ ಛೋಟಾ ಶಕೀಲ್ ಕುರಿತು ಮಾಹಿತಿ ನೀಡಿದವರಿಗೆ 20 ಲಕ್ಷ ರೂ. ಬಹುಮಾನವನ್ನು ನೀಡಲಾಗುತ್ತದೆ ಎಂದು ಹೇಳಿಕೊಂಡಿದೆ. 

ಇತರ ಭಯೋತ್ಪಾದಕರಾದ ಅನೀಸ್ ಇಬ್ರಾಹೀಂ, ಜಾವೇದ್ ಚಿಕ್ಷಾ ಹಾಗೂ ಟೈಗರ್ ಮೆಮನ್ ಮಾಹಿತಿ ನೀಡಿದವರಿಗೆ ತಲಾ 15 ಲಕ್ಷ ರೂ. ಬಹುಮಾನ ಘೋಷಿಸಿದೆ. ದಾವೂದ್ ಇಬ್ರಾಹಿಂ ಹಾಗೂ ಆತನ ಸಹಚರರು ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಎಲ್ ಇಟಿ, ಜೈಶ್ - ಎ - ಮುಹಮ್ಮದ್ ಹಾಗೂ ಅಲ್ ಖೈದಾದೊಂದಿಗೆ ಸಕ್ರಿಯ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಎನ್‌ಐಎ ಹೇಳಿಕೆಯಲ್ಲಿ ತಿಳಿಸಿದೆ. 

1993ರ ಮುಂಬೈ ಬಾಂಬ್ ಸ್ಫೋಟದ ರೂವಾರಿ ದಾವೂದ್ ಇಬ್ರಾಹೀಂ ಮತ್ತು ಇತರ ವಿಶ್ವಸಂಸ್ಥೆಯಿಂದ ಗೊತ್ತುಪಡಿಸಿದ ಭಯೋತ್ಪಾದಕರು ನೆರೆಯ ದೇಶದ ಪ್ರೋತ್ಸಾಹವನ್ನು ಆಶ್ಚರ್ಯಕರವಾಗಿ ಅನುಭವಿಸುತ್ತಿದ್ದಾರೆ ಎಂದು ಭಾರತವು ಕಳೆದ ವರ್ಷ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದೆ. ಎಲ್ ಜಿಟಿ ಹಾಗೂ ಜೈಶ್ - ಎ - ಮುಹಮ್ಮದ್ ಭಯೋತ್ಪಾದಕ ಗುಂಪುಗಳು ಮತ್ತು ಮೋಸ್ಟ್ ವಾಂಟೆಡ್ ವ್ಯಕ್ತಿಗಳಲ್ಲಿ ಒಬ್ಬರ ಬೆದರಿಕೆಗಳನ್ನು ಎದುರಿಸಲು ಅಂತರರಾಷ್ಟ್ರೀಯ ಪ್ರಯತ್ನಗಳನ್ನು ಕೇಂದ್ರೀಕರಿಸಲು ಕರೆ ನೀಡಿದೆ.