-->
ಕಣ್ಣಿಗೆ ಕಾರದ ಪುಡಿ ಎರಚಿ, ಬಿದ್ದು ಗಾಯ ಮಾಡಿಕೊಂಡರೂ, ಕಳ್ಳನನ್ನು ಬೆನ್ನಟ್ಟಿ ಹಿಡಿದ ಗಟ್ಟಿಗಿತ್ತಿ!

ಕಣ್ಣಿಗೆ ಕಾರದ ಪುಡಿ ಎರಚಿ, ಬಿದ್ದು ಗಾಯ ಮಾಡಿಕೊಂಡರೂ, ಕಳ್ಳನನ್ನು ಬೆನ್ನಟ್ಟಿ ಹಿಡಿದ ಗಟ್ಟಿಗಿತ್ತಿ!

ಹೈದರಾಬಾದ್: ಕಣ್ಣಿಗೆ ಕಾರದ ಪುಡಿ ಎರಚಿದರೂ, ಆತನನ್ನು ಹಿಡಿಯುವ ರಭಸದಲ್ಲಿ ಜಾರಿ ಬಿದ್ದು ಕಾಲಿಗೆ ಏಟಾದರೂ ಬಿಡದೇ ಗೃಹಿಣಿಯೊಬ್ಬಳು ಕಳ್ಳನೊಬ್ಬನನ್ನು ಓರ್ವಳೇ ಮಣಿಸಿ, ಆತ ಎಳೆದೊಯ್ದ ತಾಳಿ ಸರವನ್ನು ಮರಳಿ ಪಡೆದಿರುವ ಬಗ್ಗೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

ಇದು ಹೈದರಾಬಾದ್ ನ ಸೂರ್ಯಪೇಟೆ ಜಿಲ್ಲೆ ಮೋಟೆ ತಾಲೂಕಿನ ಅಪ್ಪಣ್ಣಗುಡೆಂ ಗ್ರಾಮದ ಬಾಲಾಜಿನಗರ ನಿವಾಸಿ ಗೃಹಿಣಿ ಸಿರೀಶಾ ಅವರ ಕಥೆ. ಈಕೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಪಕ್ಕದಲ್ಲಿಯೇ ಇನ್ನೆರಡು ಮನೆಗಳು ಬಾಡಿಗೆಗೆ ಖಾಲಿ ಇತ್ತು. ಇದೇ ನೆಪವೊಡ್ಡಿ ಅಲ್ಲಿಗೆ ಬಂದ ಕಳ್ಳನೋರ್ವನು ತಾನು ಮನೆ ನೋಡಬೇಕೆಂದು ಹೇಳಿದ್ದಾನೆ‌. ಆದರೆ ಈ ವೇಳೆ ಮನೆ ಮಾಲಕರು ಅಲ್ಲಿರಲಿಲ್ಲ. 

ಆದ್ದರಿಂದ ಸಿರೀಶಾ ಅವರು ಮಾಲಕರು ಇಲ್ಲ ಎಂದು ಆತನಿಗೆ ಹೇಳಿದ್ದಾರೆ. ಆಗ ಆ ಕಳ್ಳ , 'ನಾನು ಇಲ್ಲಿರುವ ನಂಬರ್ ಪಡೆದು ಮಾಲೀಕರಿಗೆ ಕರೆ ಮಾಡಿದ್ದೇನೆ. ಅವರು ನೀವು ಮನೆ ತೋರಿಸುತ್ತೀರಿ ಎಂದಿದ್ದಾರೆ' ಎಂದು ಹೇಳಿದ್ದಾನೆ. ಇದನ್ನು ನಂಬಿದ ಸಿರೀಶಾ ತಮ್ಮ ಬಳಿ ಮಾಲಕರು ಕೊಟ್ಟಿರುವ ಕೀಲಿಯಿಂದ ಮನೆ ತೆರೆದು ತೋರಿಸಿದ್ದಾರೆ. ಇನ್ನೊಂದು ಮನೆ ತೋರಿಸುವಂತೆ ಕಳ್ಳ ಹೇಳಿದ್ದಾನೆ. ಆಗ ಇನ್ನೊಂದು ಮನೆ ಬಾಗಿಲು ತೆರೆಯಬೇಕೆನ್ನುವಷ್ಟರಲ್ಲಿ ಕಳ್ಳ ಸಿರೀಶಾ ಕಣ್ಣಿಗೆ ಕಾರದ ಪುಡಿ ಎರಚಿ ಅವರ ಕೊರಳಿನಲ್ಲಿದ್ದ ಬಂಗಾರದ ತಾಳಿಯನ್ನು ಕಿತ್ತುಕೊಂಡು ಕೆಳಗೆ ಓಡಿ ಹೋಗಿದ್ದಾನೆ. ಕಣ್ಣು ಖಾರದ ಪುಡಿಯಿಂದ ಉರಿಯುತ್ತಿದ್ದರೂ ಅದನ್ನು ಉಜ್ಜಿಕೊಂಡು ಕಳ್ಳನ ಬೆನ್ನಟ್ಟಿದ್ದಾರೆ ಸಿರೀಶಾ. ಅವರು ಮೊದಲ ಮಹಡಿಯಿಂದ ಕೆಳಕ್ಕೆ ಇಳಿದು, ಆತನನ್ನು ಬೆನ್ನಟ್ಟುವ ವೇಳೆ ಸಿರೀಶಾ ಆಯತಪ್ಪಿ ಬಿದ್ದು ಕಾಲಿಗೆ ಗಾಯಮಾಡಿಕೊಂಡಿದ್ದಾರೆ.

ಆದರೂ ಬಿಡದ ಆಕೆ , ಕಳ್ಳ ಬೈಕ್ ಸ್ಟಾರ್ಟ್ ಮಾಡಿದಾಗ ಅದನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಆತ ಸುಮಾರು ಹತ್ತು ಮೀಟರ್‌ವರೆಗೂ ಬೈಕ್‌ನ್ನು ಸವಾರಿ ಮಾಡಿಕೊಂಡು ಹೋಗಿದ್ದಾನೆ. ಆದರೂ ಸಿರೀಶಾ ತಮ್ಮ ಪಟ್ಟು ಬಿಡಲಿಲ್ಲ. ಇದರಿಂದ ಕಳ್ಳ ಬೈಕ್ ನಿಯಂತ್ರಣ ಕಳೆದುಕೊಂಡು ಕೆಳಕ್ಕೆ ಬಿದ್ದಿದ್ದಾನೆ . ಇದೇ ವೇಳೆ ಸಿರೀಶಾ ಜೋರಾಗಿ ಕೂಗಿಕೊಂಡಿದ್ದರಿಂದ ಅಲ್ಲಿಯೇ ಇದ್ದ ಇಬ್ಬರು ಸ್ಥಳೀಯ ಯುವಕರು ಬಂದು ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 

ಮೊದಲೇ ಬಿದ್ದು ಏಟು ಮಾಡಿಕೊಂಡಿದ್ದ ಸಿರೀಶಾ, ಬೈಕ್ ಎಳೆದೊಯ್ದಿದ್ದರಿಂದ ಮೊಣಕಾಲುಗಳಿಗೂ ಗಾಯವಾಗಿದೆ. ಪೊಲೀಸರು ಕಳ್ಳನಿಂದ ಚಿನ್ನದ ಸರ ವಶಪಡಿಸಿಕೊಂಡು ಸಿರೀಶಾಗೆ ನೀಡಿದ್ದಾರೆ. ಆರೋಪಿಯಿಂದ ಬೈಕ್ ಹಾಗೂ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿರೀಶಾ ಅವರು ಈಗ ಭಾರಿ ಪ್ರಸಿದ್ಧಿ ಪಡೆದು ಎಲ್ಲರೂ ಅ ಸಾಹಸಕ್ಕೆ ತಲೆದೂಗುತ್ತಿದ್ದಾರೆ 

Ads on article

Advertise in articles 1

advertising articles 2

Advertise under the article