
ಅಕ್ರಮ ಸಂಬಂಧಕ್ಕೆ ಶಿಕ್ಷಕಿಯ ಹತ್ಯೆ: ಆರು ತಿಂಗಳ ಬಳಿಕ ಆರೋಪಿಗಳ ಬಂಧಿಸಿದ ಪೊಲೀಸರು
8/03/2022 08:58:00 PM
ಮೈಸೂರು: ಆರು ತಿಂಗಳ ಹಿಂದೆ
ನಿಗೂಢವಾಗಿ ಶಿಕ್ಷಕಿಯೊಬ್ಬರು ಮೃತಪಟ್ಟ ಪ್ರಕರಣವನ್ನು ನಂಜನಗೂಡು ಪೊಲೀಸರು ಕೊನೆಗೂ ಭೇದಿಸಿ, ಆರೋಪಿಗಳನ್ನು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭಾ ಸದಸ್ಯೆ ಸೇರಿದಂತೆ ನಾಲ್ವರನ್ನು ಪೊಲೀಸರು ಕಂಬಿ ಹಿಂದೆ ಕಳುಹಿಸಿದ್ದಾರೆ.
ನಂಜನಗೂಡು 5ನೇ ವಾರ್ಡ್ ನಗರಸಭಾ ಸದಸ್ಯೆ ಗಾಯತ್ರಿ, ಭಾಗ್ಯ, ನಾಗಮ್ಮ ಹಾಗೂ ಕುಮಾರ್ ಬಂಧಿತ ಆರೋಪಿಗಳು.
ಕಳೆದ ಮಾರ್ಚ್ 9ರಂದು ನಂಜನಗೂಡಿನ ಶಿಕ್ಷಕಿ ಸುಲೋಚನಾ ಮನೆಯಲ್ಲಿ ಅನುಮಾನಸ್ಪಾದ ರೀತಿಯಲ್ಲಿ ಮೃತಪಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ನಿಗೂಢ ಸಾವಿನ ಬೆನ್ನು ಹತ್ತಿಹತ್ತಿದ್ದರು. ಈ ವೇಳೆ ನಂಜನಗೂಡು ಪೊಲೀಸರಿಗೆ ಮಹತ್ವದ ಸುಳಿವೊಂದು ಸಿಕ್ಕಿತ್ತು. ಶಿಕ್ಷಕಿ ಸುಲೋಚನಾ ಕೊಲೆಗೆ ಸಂಚು ರೂಪಿಸಿರುವ ನಗರಸಭೆ ಸದಸ್ಯೆ ಗಾಯತ್ರಿ ತನ್ನ ಸಂಬಂಧಿಕರ ಸಹಾಯದೊಂದಿಗೆ ಕೊಲೆ ಮಾಡಿಸಿದ್ದಾಳೆ ಎಂದು ತಿಳಿದು ಬಂದಿದೆ. ಘಟನೆ ನಡೆದು ಆರು ತಿಂಗಳ ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶಿಕ್ಷಕಿ ಸುಲೋಚನಾ ಹಾಗೂ ಗಾಯತ್ರಿಯ ಪತಿ ಮುರುಗೇಶ್ ನಡುವೆ ಅಕ್ರಮ ಸಂಬಂಧ ಇತ್ತು. ಮರುಗೇಶ್ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಡಿ ಗ್ರೂಪ್ ನೌಕರನಾಗಿದ್ದಾನೆ. ಅಕ್ರಮ ಸಂಬಂಧ ವಿಚಾರವಾಗಿ ಗಾಯತ್ರಿ ಹಾಗೂ ಮುರುಗೇಶ್ ನಡುವೆ ಸಾಕಷ್ಟು ಬಾರಿ ಗಲಾಟೆ ನಡೆದಿತ್ತು. ಎಷ್ಟೇ ಗಲಾಟೆ ಮಾಡಿದರೂ, ಬುದ್ಧಿಮಾತು ಹೇಳಿದರೂ ಮುರುಗೇಶ್ ಮಾತ್ರ ಸುಲೋಚನಾ ಸಹವಾಸವನ್ನು ಬಿಟ್ಟಿರಲಿಲ್ಲ. ಇದೇ ಕಾರಣಕ್ಕೆ ಗಾಯತ್ರಿ ಸಂಚು ರೂಪಿಸಿ ಸುಲೋಚನಾ ಕೊಲೆ ಮಾಡಿಸಿದ್ದಾಳೆ. ಆರು ತಿಂಗಳ ಬಳಿಕ ಪೊಲೀಸರು ಘಟನೆಯ ನೈಜ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.