ನಂದ್ಯಾಲ: ಪೊಲೀಸ್ ಕಾನ್ ಸ್ಟೇಬಲ್ ರನ್ನು ಅಟ್ಟಾಡಿಸಿ ಹತ್ಯೆಗೈದ ದುಷ್ಕರ್ಮಿಗಳು; ತಿರುಪತಿಗೆ ಹೋಗಬೇಕಾಗಿದ್ದಾತ ಬಾರದ ಲೋಕಕ್ಕೆ ಪಯಣ

ನಂದ್ಯಾಲ( ಆಂಧ್ರಪ್ರದೇಶ): ಕಚೇರಿಯಿಂದ ಮನೆಗೆ ಹೋಗುತ್ತಿದ್ದ ಪೊಲೀಸ್ ಕಾನ್ಸ್​ಟೇಬಲ್​ನನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಬರ್ಬರವಾಗಿ ಹತ್ಯೆಗೈದಿರುವ ಆತಂಕಕಾರಿ ಘಟನೆಯೊಂದು ನಂದ್ಯಾಲದಲ್ಲಿ ನಡೆದಿದೆ.

ಮೃತ ಸುರೇಂದ್ರ ನಂದ್ಯಾಲ ಡಿಎಸ್‌ಪಿ ಕಚೇರಿಯಲ್ಲಿ ಕಾನ್ಸ್​ಟೇಬಲ್​​ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಹತ್ಯೆ ನಡೆಸಲು ಕಾರಣಗಳೇನೆಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ರವಿವಾರ ರಾತ್ರಿ ಕರ್ತವ್ಯ ಮುಗಿಸಿ ಬೈಕ್​ನಲ್ಲಿ ಮನೆಗೆ ತೆರಳಿರುವ ಸುರೇಂದ್ರ ರಾತ್ರಿ ತಿರುಪತಿಗೆ ಹೋಗಲು ತಯಾರಿ ನಡೆಸಿದ್ದರು. ಈ ವೇಳೆ, ಹರಿದ ಬ್ಯಾಗ್​ ಹೊಲಿಸಲು ಮತ್ತು ಹೊಸ ಚಾರ್ಜರ್ ಖರೀದಿಸಲು ಅಂಗಡಿಗೆ ತೆರಳಿದ್ದರು. ಅಲ್ಲಿಯೇ ಇದ್ದ ಟ್ಯಾಟೂ ಅಂಗಡಿ ಬಳಿ ಕೆಲ ಪುಂಡರು ಪಾನಮತ್ತರಾಗಿದ್ದರು. ಈ ವೇಳೆ ಪುಂಡರು ಹಾಗೂ ಕಾನ್ಸ್​ಟೇಬಲ್​ ಸುರೇಂದ್ರ ನಡುವೆ ಜಗಳವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.


ಇವರ ಜಗಳ ವಿಕೋಪಕ್ಕೆ ತಿರುಗಿದ್ದು, ಪುಂಡರು ತಮ್ಮ ಕೈಯಲ್ಲಿದ್ದ ಬಿಯರ್ ಬಾಟಲಿಗಳಿಂದ ಸುರೇಂದ್ರರ ತಲೆಗೆ ಹೊಡೆದಿದ್ದಾರೆ. ಆರು ಮಂದಿ ಆರೋಪಿಗಳಿದ್ದ ಕಾರಣ ಸುರೇಂದ್ರ ತಪ್ಪಿಸಿಕೊಳ್ಳಲು ಪದ್ಮಾವತಿ ಸರ್ಕಲ್ ಕಡೆಗೆ ಓಡಿದ್ದಾರೆ. ಆರೋಪಿಗಳು ಕಾನ್ ಸ್ಟೇಬಲ್ ರನ್ನು ಅಟ್ಟಾಡಿಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. 

ಬಳಿಕ ಆಟೋವೊಂದರಲ್ಲಿ ಪೊಲೀಸ್​ ಕಾನ್ಸ್​ಟೇಬಲ್​ನನ್ನು ಕರೆದೊಯ್ದು ನಂದ್ಯಾಲ ಕೆರೆ ಕಟ್ಟೆ ಬಳಿ ಎದೆಗೆ ಮತ್ತು ಬೆನ್ನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರ​ನ್ನು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ದಾರಿ ಮಧ್ಯೆ ಕಾನ್ಸ್​ಟೇಬಲ್​ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನು ಈ ಎಲ್ಲ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

BREAKING NEWS
Loading latest news...
Join our WhatsApp Channel Powered By : Online Pudu