-->

ಮಂಗಳೂರು: ಫಾಝಿಲ್ ಕೊಲೆಗೆ ಸಂಚು ರೂಪಿಸಿದ್ದು ಇಬ್ಬರು, ಆರು ಮಂದಿಯಿಂದ ಹತ್ಯೆ; ಆತನೇ ಟಾರ್ಗೆಟ್ ಏಕೆ?

ಮಂಗಳೂರು: ಫಾಝಿಲ್ ಕೊಲೆಗೆ ಸಂಚು ರೂಪಿಸಿದ್ದು ಇಬ್ಬರು, ಆರು ಮಂದಿಯಿಂದ ಹತ್ಯೆ; ಆತನೇ ಟಾರ್ಗೆಟ್ ಏಕೆ?

ಮಂಗಳೂರು: ನಗರದ ಸುರತ್ಕಲ್ ನ ಫಾಝಿಲ್ ಹತ್ಯೆಗೆ ಸಂಚು ರೂಪಿಸಿ, ಹತ್ಯೆ ಮಾಡಿರುವ ಆರು ಮಂದಿ ದುಷ್ಕರ್ಮಿಗಳನ್ನು ಮಂಗಳೂರು ಪೊಲೀಸರು ಹೆಡೆಮುರಿಕಟ್ಟಿ ಕಂಬಿ ಹಿಂದೆ ಕಳುಹಿಸಿದ್ದಾರೆ‌.

ಬಜ್ಪೆ ನಿವಾಸಿ ಸುಹಾಸ್ ಶೆಟ್ಟಿ(29), ಕುಳಾಯಿ ಕಾವಿನಕಲ್ಲು ನಿವಾಸಿ ಮೋಹನ್ ಸಿಂಗ್(26), ಕುಳಾಯಿ ವಿದ್ಯಾನಗರ ನಿವಾಸಿ ಗಿರಿಧರ್(23), ಕಾಟಿಪಳ್ಳ ನಿವಾಸಿಗಳಾದ ಅಭಿಷೇಕ್(21), ಶ್ರೀನಿವಾಸ(23), ದೀಕ್ಷಿತ್(21) ಬಂಧಿತ ಆರೋಪಿಗಳು. 


ಪೊಲೀಸರು ಫಾಝಿಲ್ ಹತ್ಯೆಗೆ ಬಳಸಲಾಗಿರುವ ಕಾರು ಮಾಲಕ ಅಜಿತ್ ಕ್ರಾಸ್ತಾನನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದ್ದರು. ಈ ವೇಳೆ ಆತ ಆರೋಪಿಗಳ ಸುಳಿವು ನೀಡಿದ್ದಾನೆ. ಕಾರು ಮಾಲಕನಿಗೆ ಆರೋಪಿಗಳು ಕೃತ್ಯ ಎಸಗುವ ಬಗ್ಗೆ ಮಾಹಿತಿ ಇದ್ದರೂ ಅಧಿಕ ಹಣದಾಸೆಗೆ ಕಾರು ನೀಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಬಲಿಯಾದ ರಾತ್ರಿಯೇ ಯಾರನ್ನಾದರೂ ಕೊಲೆ ಮಾಡಬೇಕೆಂದು ಸುಹಾಸ್ ಶೆಟ್ಟಿ ಹಾಗೂ ಅಭಿಷೇಕ್ ಸ್ಕೆಚ್ ಹಾಕಿದ್ದರು. ಮರುದಿನವೂ ಈ ಬಗ್ಗೆ ಚರ್ಚೆಯಾಗಿದ್ದು, ಈ ವೇಳೆ ಮೋಹನ್ ಸಿಂಗ್ ಇವರಿಗೆ ಜೊತೆಯಾಗುತ್ತಾನೆ. ಆತ ತನ್ನ ಬಳಗದ ಗಿರಿಧರ್, ಶ್ರೀನಿವಾಸ ಹಾಗೂ ದೀಕ್ಷಿತ್ ಎಂಬವರನ್ನು ಈ ಕೃತ್ಯಕ್ಕೆ ಸೇರ್ಪಡಿಸುತ್ತಾನೆ. ಗಿರಿಧರ್ ಕೊಲೆ ಕೃತ್ಯ ಎಸಗಲು ಅಜಿತ್ ಕ್ರಾಸ್ತಾನಿಂದ ಕಾರು ಬಾಡಿಗೆ ಪಡೆದಿದ್ದಾನೆ. ಫಾಝಿಲ್ ಹತ್ಯೆ ನಡೆದ ಜುಲೈ 28ರಂದು ಬೆಳಗ್ಗೆ ಕಾರಿನಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಸುಹಾಸ್ ಶೆಟ್ಟಿ ಹಾಗೂ ತಂಡ ಬಂಟ್ವಾಳದ ಕಾರಿಂಜೇಶ್ವರ ದೇವಸ್ಥಾನಕ್ಕೆ ತೆರಳಿತ್ತು. ಅಲ್ಲಿಂದ ಬರುವ ವೇಳೆ ಮಂಕಿಕ್ಯಾಪ್ ಗಳನ್ನು‌ ರೆಡಿ ಮಾಡಿಕೊಂಡಿದ್ದಾರೆ.

ಈ ನಡುವೆ ಯಾರನ್ನು ಹತ್ಯೆ ಮಾಡಬೇಕೆಂದು ಆರೂ ಮಂದಿಯ ನಡುವೆ ಮಾತುಕತೆ ಆಗಿದೆ. ಕೊನೆಗೆ ಫಾಝಿಲ್ ಹತ್ಯೆ ಮಾಡಲು ಸ್ಕೆಚ್ ಹಾಕಲಾಗಿದೆ. ಹತ್ಯೆ ಮಾಡಿರುವ ದಿನ ಕಿನ್ನಿಗೋಳಿ ಬಾರ್ ನಲ್ಲಿ ಊಟ ಮಾಡಿದ ಆರೋಪಿಗಳು ಫಾಝಿಲ್ ಜಾಡು ಹಿಡಿದು ಆತ ಹೆಚ್ಚಾಗಿ ಇರುವ ಸುರತ್ಕಲ್, ಮಂಗಳಪೇಟೆ ಪರಿಸರದಲ್ಲಿ ಕಾರಿನಲ್ಲಿ ಸುತ್ತಾಡಿದೆ‌. ಈ ವೇಳೆ ಸುರತ್ಕಲ್ ಫಾಝಿಲ್ ಅಂಗಡಿ ಮುಂಭಾಗ ಇರುವುದು ತಿಳಿದು ಬಂದಿದೆ. ಈ ವೇಳೆ ಗಿರಿಧರ್ ಕಾರು ಚಾಲಕನಾಗಿದ್ದ, ದೀಕ್ಷಿತ್ ಕಾರಿನಲ್ಲಿದ್ದ, ಶ್ರೀನಿವಾಸ ಯಾರಾದರೂ ಬರುತ್ತಾರೆಯೇ ಎಂದು ಪರಿಶೀಲನೆ ನಡೆಸುತ್ತಿದ್ದ. ಸುಹಾಸ್ ಶೆಟ್ಟಿ, ಮೋಹನ್ ಸಿಂಗ್ ಹಾಗೂ ಅಭಿಷೇಕ್ ಮಾರಣಾಸ್ತ್ರಗಳನ್ನು ಹಿಡಿದು ಫಾಝಿಲ್ ಮೇಲೆ ಮಾರಣಾಂತಿಕ ದಾಳಿ ಮಾಡಿ ಕಾರಿನಲ್ಲಿ ಪರಾರಿಯಾಗಿದ್ದಾರೆ‌. ಅಲ್ಲಿಂದ ಕಾರಿನಲ್ಲಿ ಪರಾರಿಯಾದ ಹಂತಕರು ಪಲಿಮಾರು ಮೂಲಕ ಹೋಗಿ ಇನ್ನಾದಲ್ಲಿ ಆ ಕಾರನ್ನು ಇಟ್ಟು ಮತ್ತೊಂದು ಕಾರು ತರಿಸಿಕೊಂಡು ಅದರಲ್ಲಿ ತಲೆ ಮರೆಸಿಕೊಂಡಿದ್ದರು. 

ಪೊಲೀಸ್ ಇಲಾಖೆ 8 ತಂಡಗಳನ್ನು ಮಾಡಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಇಂದು ಉದ್ಯಾವರದ ಬಳಿ ಆರೂ ಮಂದಿಯನ್ನು ಬಂಧಿಸಿದ್ದಾರೆ. ಎಸಿಪಿ ಮಹೇಶ್ ಕುಮಾರ್ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article