ರಾಮನಗರ: ಕುಂಭದ್ರೋಣ ಮಳೆಗೆ ಹಿಂಡಿ ಹಿಪ್ಪೇಕಾಯಿಯಂತಾಗಿರುವ ರಾಮನಗರ ಜಿಲ್ಲೆಯಲ್ಲಿ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ರಸ್ತೆ ಪೂರ್ತಿ ನಿಂತಿರುವ ನೀರಿನಲ್ಲಿ ಸಂಚರಿಸುತ್ತಿದ್ದ ಬಸ್ ನೀರಿನಲ್ಲಿ ಮುಳುಗಡೆಯಾಗುತ್ತಿತ್ತು. ತಕ್ಷಣ ಕಾರ್ಯೋನ್ಮುಖರಾದ ಸ್ಥಳೀಯ ಯುವಕರು ಬಸ್‌ನಲ್ಲಿದ್ದ 50 ಕ್ಕೂ ಅಧಿಕ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಈ ಘಟನೆ ಸೋಮವಾರ ಮುಂಜಾನೆ ವೇಳೆ ನಡೆದಿದೆ.
ಮದ್ದೂರಿನಿಂದ ಬೈಪಾಸ್ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಉದಯರಂಗ ಬಸ್ ಬಿಳಗುಂಬ ರಸ್ತೆ ಬಳಿಯ ಅಂಡರ್‌ಪಾಸ್‌ನಲ್ಲಿ ನೀರು ತುಂಬಿರುವ ರಸ್ತೆಯಲ್ಲಿ ಸಿಲುಕಿಕೊಂಡಿದೆ. ನೀರು ಬಸ್‌ನೊಳಗೆ ನುಗ್ಗಿ ಬಸ್ ನಲ್ಲಿದ್ದವರ ಎದೆಯ ಮಟ್ಟಕ್ಕೆ ತುಂಬಿದೆ. ಪರಿಣಾಮ ಬಸ್ ನಲ್ಲಿದ್ದವರು ಆತಂತಕ್ಕೆ ಒಳಗಾಗಿದ್ದಾರೆ. ತಕ್ಷಣ ಸ್ಪಂದಿಸಿದ ಸ್ಥಳೀಯ ಯುವಕರು ಬಸ್ ನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ತುರ್ತು ನಿರ್ಗಮನ ದ್ವಾರದ ಮೂಲಕ ಹೊರಗೆ ಕರೆತರುವಲ್ಲಿ ಯಶಸ್ವಿ ಆಗಿದ್ದಾರೆ. ಪರಿಣಾಮ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಇನ್ನು ಬೆಂಗಳೂರು - ಮೈಸೂರು ಹೆದ್ದಾರಿಯ ಬಸವನಪುರ ಬಳಿಯ ಅಂಡರ್‌ಪಾಸ್‌ನಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯ ನೀರು ಸಂಗ್ರಹವಾಗಿದ್ದು , ಈ ನೀರಿನಲ್ಲಿ 3 ಕಾರುಗಳು ಮುಳಗಡೆ ಆಗಿವೆ. ಹಲವಾರು ದಿನಗಳಿಂದ ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನನುಕೂಲವಾಗುತ್ತಿದ್ದರೂ ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ವಿಫಲವಾಗಿದ್ದರು . ಸೋಮವಾರವೂ ಈ ವ್ಯಾಪ್ತಿಯಲ್ಲಿ ಕೆರೆಯಂತೆ ನೀರು ತುಂಬಿದ್ದು , ಹತ್ತಾರು ಕಿ.ಮೀ.ವರೆಗೂ ವಾಹನಗಳು ಸಾಲುಗಟ್ಟಿವೆ.