ಬೆಂಗಳೂರು: ಶಂಕಿತ ಉಗ್ರನನ್ನು ವಶಪಡಿಸಿಕೊಂಡ ಸಿಸಿಬಿ ಪೊಲೀಸ್; ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ!

ಬೆಂಗಳೂರು: ರಾಜ್ಯ ರಾಜ್ಯಧಾನಿಯಲ್ಲಿ ಮತ್ತೊಬ್ಬ ಶಂಕಿತ ಉಗ್ರ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತನನ್ನು ವಶಪಡಿಸಿಕೊಂಡ ಸಿಸಿಬಿ ಪೊಲೀಸರು ಅವನ ವಿಚಾರಣೆ ಮುಂದುವರಿಸಿದ್ದಾರೆ. 

ಅಸ್ಸಾಂ ಮೂಲದ ಅಖ್ತರ್ ಹುಸೇನ್ ಲಷ್ಕರ್ ಎಂಬಾತ ರವಿವಾರ ರಾತ್ರಿ ಸಿಸಿಬಿ ಪೊಲೀಸ್ ಬಲೆಗೆ ಬಿದ್ದ ಶಂಕಿತ ಉಗ್ರ. ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ‌‌ ಈತ ಕೆಲ ಯುವಕರೊಂದಿಗೆ ಬೆಂಗಳೂರಿನ ತಿಲಕ್ ನಗರದ ಬಿಟಿಪಿ ಏರಿಯಾದ ಮನೆಯೊಂದರ ಮೂರನೇ ಮಹಡಿಯಲ್ಲಿ ವಾಸವಿದ್ದ. ಭಯೋತ್ಪಾದನಾ ಕೃತ್ಯದಲ್ಲಿ ಅಖ್ತರ್ ತೊಡಗಿದ್ದ ಎನ್ನಲಾಗಿದೆ. 

ಅಖ್ತರ್ ಹುಸೇನ್ ಲಷ್ಕರ್ ‌ಉತ್ತರ ಭಾರತದಿಂದ ಪರಾರಿಯಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದರ ಬಗ್ಗೆ ಗುಪ್ತಚರ ದಳದಿಂದ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ 8 ಗಂಟೆಗೆ ಶಂಕಿತ ಉಗ್ರ ವಾಸವಿದ್ದ ಮನೆಯ ಮೇಲೆ ದಾಳಿ ನಡೆಸಿದ 30ಕ್ಕೂ ಅಧಿಕ ಸಿಸಿಬಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇತ್ತೀಚಿಗೆ ಬೆಂಗಳೂರಿನ ಓಕಳಿಪುರಂನಲ್ಲಿ ತಾಲಿಬ್ ಹುಸೇಬ್ ಎಂಬ ಶಂಕಿತ ಉಗ್ರನೊಬ್ಬನನ್ನು ಪೊಲೀಸರು ಬಂಧಿಸಿದ್ದರು.