ಬಾಗಲಕೋಟೆ: ಅಪಘಾತವಾಗಿದೆ ಎಂದು ಪತ್ನಿಗೆ ಕರೆ ಮಾಡಿದ ಪತಿಗೆ ಆಕೆ ಸಾವಿನ ಮನೆಯ ದಾರಿ ತೋರಿಸಿದ್ದಾಳೆಂಬ ಕೃತ್ಯವೊಂದು ಕೊಲೆ ನಡೆದ 16 ದಿನಗಳ ಬಳಿಕ ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಜುಲೈ 2ರಂದು ಬಾಗಲಕೋಟೆಯ ಹುನಗುಂದ ತಾಲೂಕಿನ ಕಮತಗಿ ಕ್ರಾಸ್ ಬಳಿ ಪ್ರವೀಣ್ ಸೇಬಣ್ಣನವರ್(30) ಎಂಬವರಿಗೆ ಮೃತಪಟ್ಟಿದ್ದರು. ಪ್ರಾರಂಭದಲ್ಲಿ ಇದನ್ನು ಅಪಘಾತವೆಂದೇ ತಿಳಿಯಲಾಗಿತ್ತು. ಆದರೆ ಇದೊಂದು ಪೂರ್ವ ನಿಯೋಜಿತ ಕೊಲೆ ಎಂದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಈ ಕೊಲೆ ನಡೆಸಿದ್ದು ಆತನ ಪತ್ನಿ ನಿತ್ಯಾ ಎಂಬಾಕೆಯೇ ಎಂಬುದು ತನಿಖೆಯಿಂದ ಬಯಲಾಗಿದೆ.
ನಿತ್ಯಾ, ಮೃತ ಪ್ರವೀಣ್ ಸೇಬಣ್ಣನವರ್ ನೊಂದಿಗೆ ಪ್ರೇಮ ವಿವಾಹವಾಗಿದ್ದರೂ, ರಾಘವೇಂದ್ರ ಎಂಬಾತನೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಳು. ಆದ್ದರಿಂದ ರಾಘವೇಂದ್ರನೊಂದಿಗೆ ಸೇರಿಕೊಂಡು ಪ್ಲ್ಯಾನ್ ಮಾಡಿ ಪತಿಯನ್ನೇ ಕೊಲೆಗೈದಿದ್ದಾಳೆ.
ಕಾರಿನಲ್ಲಿ ಬಂದ ನಿತ್ಯಾ ಹಾಗೂ ಆಕೆಯ ಪ್ರಿಯಕರ ಕಮತಗಿಯಲ್ಲಿ ಪ್ರವೀಣ್ ಬೈಕ್ ಗೆ ಢಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಿದ್ದರು. ಆದರೆ ಪ್ರವೀಣ್ ನಿತ್ಯಾಗೆ ಕರೆ ಮಾಡಿ ತನಗೆ ಅಪಘಾತವಾಗಿದೆ ಆಸ್ಪತ್ರೆಗೆ ದಾಖಲಿಸು ಎಂದು ಕರೆ ಮಾಡಿದ್ದಾನೆ. ಆದ್ದರಿಂದ ತಿರುಗಿ ಬಂದ ನಿತ್ಯಾ ಮತ್ತೆ ಕಾರು ಹತ್ತಿಸಿ ಕೊಲೆಗೈದಿದ್ದಾಳೆ ಎಂದು ತನಿಖೆಯಿಂದ ಬಯಲಾಗಿದೆ.
ಮೇಲ್ನೋಟಕ್ಕೆ ಕೊಲೆ ಎಂದು ಕಂಡು ಬಂದರೂ, ಪೊಲೀಸರಿಗೆ ಅನುಮಾನ ಕಾಡಿತ್ತು. ಆದ್ದರಿಂದ ಪೊಲೀಸ್ ಬುದ್ಧಿ ಉಪಯೋಗಿಸಿ ಪತ್ನಿ ನಿತ್ಯಾಳನ್ನೇ ವಿಚಾರಿಸಿದ್ದಾರೆ. ಆಗ ಆಕೆಯೇ ಪ್ರಿಯಕರನೊಂದಿಗೆ ಸೇರಿ ಕೊಲೆಗೈದಿರುವ ವಿಚಾರ ಬೆಳಕಿಗೆ ಬಂದಿದೆ.