ಫೇಸ್ ಬುಕ್ ನಲ್ಲಿ ಸಿಕ್ಕಿದ್ದ ಗೆಳೆಯನ ಪ್ರೇಮಪಾಶಕ್ಕೆ ಬಿದ್ದ ಯುವತಿಗೆ ಆತ ಮುಖಾಮುಖಿಯಾದಾಗ ಕಾದಿತ್ತು ಶಾಕ್!

ಬಂಟ್ವಾಳ: ಫೇಸ್ ಬುಕ್ ನಲ್ಲಿ‌ ನಾಲ್ಕು ವರ್ಷಗಳ ಕಾಲ ಈ ಯುವತಿ ಯುವಕನೊಬ್ಬನ ಪ್ರೀತಿಯ ಬಲೆಗೆ ಬಿದ್ದಿದ್ದಳು. ಮನೆಯವರನ್ನೂ ವಿರೋಧಿಸಿ ಆತನನ್ನು ಪ್ರೀತಿಸಿದ ಯುವತಿಗೆ ಆತ ಮುಖಾಮುಖಾಗಿದ್ದಾಗ ಮಾತ್ರ ಕಾದಿತ್ತು ಶಾಕ್..!

ಹೌದು.... ಆತ ಯುವಕನಾಗಿರಲಿಲ್ಲ, ಬದಲಾಗಿ ಮಂಗಳಮುಖಿಯಾಗಿದ್ದಳು. ಇದೀಗ ಬೇಸ್ತು ಬಿದ್ದಿರುವ ಯುವತಿ ವಿಟ್ಲ ಠಾಣೆಯ ಮೆಟ್ಟಿಲೇರಿದ್ದಾಳೆ. ಪೊಲೀಸರು ಶಂಕರನಾರಾಯಣದಲ್ಲಿದ್ದ ಮಂಗಳಮುಖಿಯನ್ನು ಅರೆಸ್ಟ್ ಮಾಡಿದ್ದಾರೆ.‌ ಈ ಮಂಗಳಮುಖಿ ತನ್ನ ಹೆಸರು ಪ್ರದೀಪ್. ತಾನು ಸಿವಿಲ್ ಇಂಜಿನಿಯರ್ ಎಂದು ಹೇಳಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿದೆ.

ಸುಮಾರು 4 ವರ್ಷಗಳಿಂದ ಬಂಟ್ವಾಳದ ಈ ಯುವತಿ ಫೇಸ್​​ಬುಕ್ ನಲ್ಲಿ ಪರಿಚಯವಾದ ಮಂಗಳಮುಖಿಯನ್ನು ಯುವಕನೆಂದೇ ನಂಬಿ ಪ್ರೇಮಪಾಶಕ್ಕೆ ಬಿದ್ದಿದ್ದಳು. ಫೇಸ್​​ಬುಕ್​​ ಮೆಸೆಂಜರ್​ನಲ್ಲಿ ಚಾಟಿಂಗ್​, ದೂರವಾಣಿ ಕರೆಯಲ್ಲೂ ಇಬ್ಬರೂ ಮಾತನಾಡುತ್ತಿದ್ದರು. ಪುತ್ರಿಯ ಈ ಪ್ರೇಮ ಪ್ರಕರಣ ಆಕೆಯ ತಾಯಿಗೆ ತಿಳಿದು ಬಂದಿದೆ. ಬಳಿಕ ಈ ವಿಚಾರವನ್ನು ಬಂಟ್ವಾಳದ ನ್ಯಾಯವಾದಿ ಶೈಲಜಾ ರಾಜೇಶ್ ಬಳಿ ಹೇಳಿಕೊಂಡಿದ್ದರು. 

ನ್ಯಾಯವಾದಿ ಶೈಲಜಾ ಅವರು ವಿಟ್ಲ ಪೊಲೀಸರ ಸಹಾಯದಿಂದ ಪ್ರಕರಣದ ಜಾಡು ಹಿಡಿದು ಹೊರಟಾಗಲೇ ಮಂಗಳಮುಖಿಯ ಅಸಲಿ ಮುಖ ಬಯಲಾಗಿದೆ. ಮೊಬೈಲ್ ಲೊಕೇಶನ್ ಹುಡುಕಾಡಿಕೊಂಡು ಉಡುಪಿ ಜಿಲ್ಲೆಯ ಶಂಕರನಾರಾಯಣ ಎಂಬಲ್ಲಿಗೆ ಹೋದಾಗ, ಅಲ್ಲಿದ್ದದ್ದು ಮಂಗಳಮುಖಿ ಎಂಬುದು ಗೊತ್ತಾಗಿದೆ. ಇದೀಗ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಗಳಮುಖಿಯನ್ನು ಬಂಧಿಸಲಾಗಿದೆ.