ಪತ್ನಿಯನ್ನು ರಕ್ಷಿಸಲು ಹೋಗಿ ಪತಿ, ಹೆತ್ತವರನ್ನು ಎಬ್ಬಿಸಲು ಹೋಗಿ ಮಕ್ಕಳು ವಿದ್ಯುತ್ ಆಘಾತಕ್ಕೆ ಬಲಿ: ಓರ್ವ ಪುತ್ರ ಅನಾಥ

ಕಾಮರೆಡ್ಡಿ(ತೆಲಂಗಾಣ): ವಿದ್ಯುತ್ ಆಘಾತಕ್ಕೆ ದಂಪತಿ ಹಾಗೂ ಇಬ್ಬರು ಪುಟ್ಟ ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಬೀಡಿ ವರ್ಕರ್ಸ್​ ಕಾಲನಿಯಲ್ಲಿ ನಡೆದಿದೆ. 

ಆಟೋ ಚಾಲಕನಾದ ಕಾಲನಿಯ ಅಹಮದ್ (35), ಪತ್ನಿ ಪರ್ವೀನ್ (30), ಮಗಳು ಮಹಿಮ್ (6) ಹಾಗೂ ಅದ್ನಾನ್ (3) ಮೃತಪಟ್ಟ ದುರ್ದೈವಿಗಳು.

ಅಹಮದ್ ಕುಟುಂಬ ಸಣ್ಣ ಹುಲ್ಲಿನ ಮನೆಯಲ್ಲಿ ವಾಸಿಸುತ್ತಿತ್ತು. ಮಳೆ ಹಿನ್ನೆಲೆಯಲ್ಲಿ ಮಂಗಳವಾರ ಶಾಲೆಗೆ ರಜೆ ನೀಡಲಾಗಿತ್ತು. ಮಕ್ಕಳಲ್ಲಿ ಫೈಜಾನ್ ಎಂಬಾತ ಅಜ್ಜಿ ಮನೆಯಲ್ಲಿದ್ದ. ಉಳಿದವರು ಮನೆಯಲ್ಲಿದ್ದರು. ಮನೆಗೋಡೆಗೆ ಕಟ್ಟಿದ್ದ ಕಬ್ಬಿಣದ ತಂತಿ ಮೇಲೆ ಬಟ್ಟೆ ಒಣಗಿಸುತ್ತಿದ್ದ ಪರ್ವೀನ್​ಗೆ ವಿದ್ಯುತ್ ಸ್ಪರ್ಶಿಸಿದೆ. ತಕ್ಷಣ ಆಕೆಯ ರಕ್ಷಣೆಗೆ ಧಾವಿಸಿದ ಅಹಮದ್‌ಗೂ ಶಾಕ್ ಹೊಡೆದಿದೆ. ತಂದೆ-ತಾಯಿ ಕುಸಿದು ಬೀಳುವುದನ್ನು ಕಂಡ ಪುತ್ರಿ ಮಹೀಮ್ ಮತ್ತು ಪುತ್ರ ಅದ್ನಾನ್​ ಇಬ್ಬರು ಜೋರಾಗಿ ಕಿರುಚುತ್ತಾ ಪೋಷಕರ ಬಳಿ ಓಡಿ ಅವರನ್ನು ಮುಟ್ಟಿದ್ದಾರೆ. ಆಗ ಅವರಿಗೂ ವಿದ್ಯುತ್ ಸ್ಪರ್ಶಿಸಿದೆ. ಹೀಗೆ ಒಬ್ಬರ ಹಿಂದೆ ಮತ್ತೊಬ್ಬರಂತೆ ವಿದ್ಯುತ್​ ತಗುಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಕ್ಕಳ ಬೊಬ್ಬೆ ಕೇಳಿ ನೆರೆಹೊರೆಯವರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ನಾಲ್ವರನ್ನೂ ಜಿಲ್ಲಾಸ್ಪತ್ರೆಗೆ ರವಾನಿಸಿದ್ದರು. ಅಷ್ಟರಲ್ಲಿ ಅವರೆಲ್ಲರೂ ಮೃತಪಟ್ಟಿದ್ದಾರೆ. ಪರ್ವೀನ್ ತಂದೆ ಹಕೀಂ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತರ ಕುಟುಂಬಕ್ಕೆ ಸರ್ಕಾರ 3 ಲಕ್ಷ ರೂಪಾಯಿ ಪರಿಹಾರ ನೀಡಲಿದೆ ಎಂದು ಸಚಿವ ವೇಮುಲ ಪ್ರಶಾಂತ್ ರೆಡ್ಡಿ ತಿಳಿಸಿದ್ದಾರೆ. ತಂದೆ-ತಾಯಿ, ಅಕ್ಕ-ತಮ್ಮನನ್ನು ಕಳೆದುಕೊಂಡು ಅನಾಥವಾಗಿರುವ ಪುತ್ರ ಫೈಜಾನ್​ನ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲಾಗುವುದು ಎಂದು ಸಚಿವರು ಭರವಸೆ ಕೊಟ್ಟಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu