ಮಂಗಳೂರು: ರಾಹುಲ್ ಗಾಂಧಿಗೆ ಇಡಿ ಸಂಕಷ್ಟ; ಐಟಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಮುಖಂಡರು ವಶಕ್ಕೆ

ಮಂಗಳೂರು: ಬಿಜೆಪಿ ಸರಕಾರ ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿ ಮಂಗಳೂರಿನ ಐಟಿ ಕಚೇರಿಗೆ ನುಗ್ಗಲೆತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಮಂಗಳೂರು ಪೊಲೀಸರು ‌ವಶಕ್ಕೆ ಪಡೆದಿದ್ದಾರೆ.


ಇಡಿ ಕಚೇರಿಯನ್ನು ದುರ್ಬಳಕೆ ಮಾಡಿರುವ ಬಿಜೆಪಿ ಸರಕಾರ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರನ್ನು ಹಿಂಸಿಸುತ್ತಿದೆ ಎಂದು ಆರೋಪಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳೂರಿನ ಫಳ್ನೀರ್ ನಲ್ಲಿರುವ ಐಟಿ ಕಚೇರಿಗೆ ಮುತ್ತಿಗೆ ಯತ್ನ ನಡೆಯಿತು. ಮೊದಲಿಗೆ ಫಳ್ನೀರುವಿನಲ್ಲಿರುವ ಎಸ್.ಎಲ್.ಮಥಾಯಸ್ ಸರ್ಕಲ್ ನಿಂದ ಐಟಿ ಕಚೇರಿಯತ್ತ ಮೆರವಣಿಗೆ ನಡೆಯಿತು.

ಈ ಸಂದರ್ಭ ದ.ಕ.ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು ಐಟಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸುತ್ತಿದ್ದರು. ಈ ವೇಳೆ ಪೊಲೀಸರು ಮಾಜಿ ಸಚಿವ ಬಿ. ರಮಾನಾಥ ರೈ, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಐವನ್ ಡಿಸೋಜ, ಮಿಥುನ್ ರೈ ಸೇರಿದಂತೆ ಹಲವು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಬಿಡುಗಡೆಗೊಳಿಸಿದ್ದಾರೆ.