-->
ಮಂಗಳೂರು: ಮಳಲಿ ಮಸೀದಿಯಲ್ಲಿ ದೇವಾಲಯ ಶೈಲಿಯ ಕಟ್ಟಡ ವಿವಾದ ಪ್ರಕರಣ; ವಿಚಾರಣೆ ನಾಳೆಗೆ ಮುಂದೂಡಿಕೆ

ಮಂಗಳೂರು: ಮಳಲಿ ಮಸೀದಿಯಲ್ಲಿ ದೇವಾಲಯ ಶೈಲಿಯ ಕಟ್ಟಡ ವಿವಾದ ಪ್ರಕರಣ; ವಿಚಾರಣೆ ನಾಳೆಗೆ ಮುಂದೂಡಿಕೆ

ಮಂಗಳೂರು: ಮಳಲಿಯ ಮಸೀದಿ ಆಡಳಿತ ಮಂಡಳಿ ಹಾಗೂ ವಿಎಚ್ ಪಿ ನಡುವಿನ ವಿವಾದ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಇಂದು ಈ ವಿಚಾರವಾಗಿ ನ್ಯಾಯಾಲಯದಲ್ಲಿ ವಿಎಚ್ ಪಿ ಪರ ವಕೀಲ ಚಿದಾನಂದ ಕೆದಿಲಾಯ ಸುದೀರ್ಘ ವಿಚಾರಣೆಯನ್ನು ಮಂಡಿಸಿದ್ದಾರೆ. ವಾದವನ್ನು ಆಲಿಸಿದ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು   ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದಾರೆ.

ವಾದದಲ್ಲಿ ಚಿದಾನಂದ ಕೆದಿಲಾಯ ಅವರು, ನಮ್ಮ ಅರ್ಜಿದಾರರು ಸಲ್ಲಿಸಿರುವ ಅರ್ಜಿ ವಕ್ಫ್ ಟ್ರಿಬ್ಯನಲ್ ವ್ಯಾಪ್ತಿಗೆ ಬರುವುದಿಲ್ಲ. ನಾವು ಎಲ್ಲೂ ಅದು ವಕ್ಫ್ ಆಸ್ತಿಯೇ ಎಂಬುದರ ಬಗ್ಗೆ ಪ್ರಶ್ನೆ ಹಾಕಿಲ್ಲ. ನಮ್ಮ ಅರ್ಜಿದಾರರು ಅದೊಂದು ಐತಿಹಾಸಿಕ ಸ್ಮಾರಕ ಅಥವಾ ದೇವಸ್ಥಾನವೆಂದು ಹೇಳಿದ್ದಾರೆ.‌ ಆದ್ದರಿಂದ ಅದನ್ನು ಸಂರಕ್ಷಣೆ ಮಾಡುವಂತೆ ಅರ್ಜಿಯಲ್ಲಿ ಕೇಳಿದ್ದಾರೆ.‌ ಮಸೀದಿಯಿರುವ ಕಟ್ಟಡ ಐತಿಹಾಸಿಕ ಸ್ಮಾರಕವೋ, ಮಸೀದಿಯೋ ಅನ್ನೋದನ್ನು ವಕ್ಫ್ ಟ್ರಿಬ್ಯೂನಲ್ ನಿರ್ಧರಿಸಲಾಗುವುದಿಲ್ಲ.‌ ಹೀಗಾಗಿ ಅದನ್ನು ಸಿವಿಲ್ ಕೋರ್ಟ್ ತಕ್ಷಣ ನಿರ್ಧರಿಸಬೇಕು. ಆ ಜಾಗದ ಸರ್ವೆಗೆ ಆದೇಶ ಮಾಡಿದರೆ ಅಲ್ಲಿನ ಸ್ಮಾರಕ ಯಾವುದು ಎಂಬುದು ತಿಳಿಯುತ್ತದೆ ಎಂದು ಹೇಳಿದರು.

1991ರ ಪೂಜಾ ಸ್ಥಳ ಕಾಯ್ದೆಯಡಿಯೂ ಅರ್ಜಿಯನ್ನು ವಜಾಗೊಳಿಸಲು ಆಗುವುದಿಲ್ಲ. ಪೂಜಾಸ್ಥಳ ಕಾಯ್ದೆಯಲ್ಲೂ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯ ಬಗ್ಗೆ ಹೇಳಲಾಗಿದೆ. ಹೀಗಿರುವಾಗ ನಮ್ಮ ಅರ್ಜಿದಾರರ ವಾದದಂತೆ‌ ಅಲ್ಲಿರುವ ಸ್ಮಾರಕ ಯಾವುದೆಂದು ತಿಳಿಯಬೇಕು. ಅದು ಸರ್ವೇ ಮೂಲಕ ಗೊತ್ತಾದರೆ ಮಾತ್ರ ಅದನ್ನು ಸಂರಕ್ಷಣೆ ಮಾಡಲು ಸಾಧ್ಯ. ಆದ್ದರಿಂದ ಈಗ ಇರುವ ತಡೆಯಾಜ್ಞೆಯನ್ನು ತೆರವು ಮಾಡಿದರೆ ಅಲ್ಲಿ ಮಸೀದಿ ನಿರ್ಮಾಣ ಆಗುತ್ತದೆ. ಆದ್ದರಿಂದ ಐತಿಹಾಸಿಕ ಸ್ಮಾರಕವೊಂದರ ಸಂರಕ್ಷಣೆ ಅಸಾಧ್ಯ ಎಂದು ಚಿದಾನಂದ ಕೆದಿಲಾಯ ವಾದ ಮಂಡನೆ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article