
ಮುಸ್ಲಿಮರ ಓಟು ಬೇಡ ಎಂದ ಶಾಸಕ ಹರೀಶ್ ಪೂಂಜಾರಿಂದಲೇ ಅಲ್ಪಸಂಖ್ಯಾತರ ಸಮಾವೇಶ: ಮುಸ್ಲಿಮ್ ಟೋಪಿ, ಹಸಿರು ಶಾಲು ಕೊರಿಯರ್ ಮಾಡಿದ ಸಿಪಿಎಂ ಕಾರ್ಯಕರ್ತ!
6/22/2022 09:15:00 PM
ಮಂಗಳೂರು: ತನಗೆ ಮುಸ್ಲಿಮರ ಓಟು ಬೇಡವೆಂದು ಬಹಿರಂಗವಾಗಿ ಭಾಷಣ ಮಾಡಿದ್ದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಅವರ ನೇತೃತ್ವದಲ್ಲಿ ಇದೀಗ ಅಲ್ಪಸಂಖ್ಯಾತರ ಸಮಾವೇಶ ನಡೆಯುತ್ತಿದೆ. ಆದರೆ ಇದೀಗ ಈ ಸಮಾವೇಶದ ಬಗ್ಗೆ ವ್ಯಂಗ್ಯವಾಡಿ ಸಿಪಿಎಂ ಕಾರ್ಯಕರ್ತ ಶಾಸಕರ ಕಚೇರಿಗೆ ಮುಸ್ಲಿಮ್ ಟೋಪಿ ಹಾಗೂ ಹಸಿರು ಶಾಲನ್ನು ಕೊರಿಯರ್ ಮೂಲಕ ರವಾನಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ಸಭೆಯೊಂದರಲ್ಲಿ ಸಾರ್ವಜನಿಕ ಭಾಷಣದಲ್ಲಿ ತನಗೆ ಮುಸ್ಲಿಮರ ಮತಗಳು ಬೇಡವೆಂದು ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಆದರೆ ಈ ಬಗ್ಗೆ ಆಗಲೇ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆದಿತ್ತು.
ಇದೀಗ ಮೋದಿ ಸರಕಾರದ 8ನೇ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ ಅಲ್ಪಸಂಖ್ಯಾತರ ಸಮಾವೇಶವನ್ನು ಆಯೋಜಿಸಲಾಗಿದೆ.
ಆದರೆ ಮುಸ್ಲಿಮರ ಓಟು ತನಗೆ ಬೇಡವೆಂದು ಭಾಷಣ ಮಾಡಿರುವ ಶಾಸಕ ಹರೀಶ್ ಪೂಂಜಾ ಅಲ್ಪಸಂಖ್ಯಾತ ಸಮಾವೇಶ ನಡೆಸುವುದನ್ನು ಸಿಪಿಎಂ ಕಾರ್ಯಕರ್ತ ಶೇಖರ ಲಾಯಿಲಾ ಅವರು ವ್ಯಂಗ್ಯವಾಡಿದ್ದಾರೆ. ಅಲ್ಲದೆ ಅವರು ಶಾಸಕರ ಕಚೇರಿಗೆ ಮುಸ್ಲಿಂ ಟೋಪಿ, ಹಸಿರು ಶಾಲು ರವಾನಿಸಿದ್ದಾರೆ. ಜೊತೆಗೆ ಶಾಸಕರಿಗೆ ಪತ್ರವನ್ನೂ ಬರೆದಿದ್ದಾರೆ.