ಮಂಗಳೂರು: ಮರವೂರು ಸೇತುವೆ ಬಳಿ ರಸ್ತೆ ಕುಸಿತ!
Thursday, June 30, 2022
ಮಂಗಳೂರು: ಇಂದು ಸುರಿಯುತ್ತಿರುವ ಭಾರೀ ಮಳೆಗೆ ಮಂಗಳೂರು ವಿಮಾನ ನಿಲ್ದಾಣ ಮಾರ್ಗದಲ್ಲಿರುವ ಮರವೂರು ಸೇತುವೆ ಬಳಿಯ ರಸ್ತೆಯು ಕುಸಿತಗೊಂಡಿದೆ. ಸೇತುವೆಯ ಪಕ್ಕದಲ್ಲಿ ರಸ್ತೆಯ ಬದಿಯು ಕುಸಿತಗೊಂಡು ಹೊಂಡಮಯವಾಗಿದೆ.
ಮರವೂರು ಸೇತುವೆಯ ರಸ್ತೆಯು ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಇತ್ತೀಚೆಗೆ ಮರವೂರು ಸೇತುವೆ ಅಲ್ಪಪ್ರಮಾಣದಲ್ಲಿ ಕುಸಿತ ಕಂಡು ಜನತೆ ಭೀತಿಗೊಳಗಾಗಿದ್ದರು. ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಸೇತುವೆಯ ಮೇಲೆ ವಾಹನ ಸಂಚಾರ, ಜನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ದುರಸ್ತಿ ಬಳಿಕ ಮತ್ತೆ ಸೇತುವೆಯ ಮೇಲಿನಿಂದ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಇಂದು ಸುರಿಯುತ್ತಿರುವ ಮಳೆಗೆ ಸೇತುವೆಯ ಪಕ್ಕದಲ್ಲಿರುವ ರಸ್ತೆಯ ಬದಿ ಸಂಪೂರ್ಣ ಬಾಯ್ದೆರೆದು ನಿಂತಿದೆ. ತಕ್ಷಣ ಸ್ಥಳಕ್ಕೆ ಪಿಡಬ್ಲ್ಯುಡಿ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅಧಿಕಾರಿಗಳು ದುರಸ್ತಿ ಕಾಮಗಾರಿಯನ್ನು ನಡೆಸುತ್ತಿದ್ದಾರೆ.