ಮಂಗಳೂರು: ಗಾಂಜಾ ಸಾಗಾಟ ಪ್ರಕರಣದಲ್ಲಿ ಜಾಮೀನಿ ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಇಂದು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮ ನಿವಾಸಿ ಜಾಕಿರ್ ಹುಸೇನ್ ಅಲಿಯಾಸ್ ತಾಜಿ (29) ಬಂಧಿತ ಆರೋಪಿ.
2017ರಲ್ಲಿ ಆರೋಪಿ ಜಾಕಿರ್ ಹುಸೇನ್ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜ್ಪೆ ಪೊಲೀಸರಿಂದ ಬಂಧಿಸಲ್ಪಟ್ಟು ನ್ಯಾಯಾಲಯದಿಂದ ಜಾಮೀನು ಪಡೆದಿದ್ದ. ಆದರೆ ಆ ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇದೀಗ ಆತನನ್ನು 5 ವರ್ಷಗಳ ಬಳಿಕ ಬಜ್ಪೆ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದಾರೆ.
ಆರೋಪಿ ಜಾಕಿರ್ ಹುಸೇನ್ ಮೇಲೆ ಮಂಗಳೂರಿನ ಮುಲ್ಕಿ ಠಾಣೆಯಲ್ಲಿ ಕೊಲೆ ಮತ್ತು ದರೋಡೆ ಸೇರಿ ಒಟ್ಟು 3 ಪ್ರಕರಣ, ಬಂದರು ಠಾಣೆಯಲ್ಲಿ 2 ಪ್ರಕರಣ, ಪಾಂಡೇಶ್ವರ ಠಾಣೆಯಲ್ಲಿ 2 ಪ್ರಕರಣ, ಮೂಡುಬಿದಿರೆ ಠಾಣೆಯಲ್ಲಿ 1 ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿಯನ್ನು ಬಜಪೆ ಠಾಣಾ ಪಿಎಸ್ಐ ಗುರು ಕಾಂತಿ, ಹೆಡ್ ಕಾನ್ಸಟೇಬಲ್ ರೋಹಿತ್ ಪಾವಂಜೆ ಮತ್ತು ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.