ಮಂಗಳೂರು: ಸ್ಯಾಕ್ಸೋಫೋನ್ ವಾದನ ಕಲಾವಿದೆ ನೇಣಿಗೆ ಶರಣು

ಮಂಗಳೂರು: ಸ್ಯಾಕ್ಸೋಫೋನ್ ವಾದನ ಕಲಾವಿದೆಯೋರ್ವರು ನೇಣಿಗೆ ಶರಣಾಗಿರುವ ಘಟನೆ ಮಂಗಳೂರು ನಗರದ ಹೊರವಲಯದ ಶಕ್ತಿನಗರದಲ್ಲಿ ನಡೆದಿದೆ. 

ಎಸ್.ಎಸ್. ಅಪಾರ್ಟ್‌ಮೆಂಟ್ ನಲ್ಲಿ  ವಾಸ್ತವ್ಯವಿದ್ದ ಸ್ಯಾಕ್ಸೋಫೋನ್ ಕಲಾವಿದೆ ಸುಜಾತಾ ದೇವಾಡಿಗ (31)  ಮೃತಪಟ್ಟ ದುರ್ದೈವಿ. ಅವರು ಮಂಗಳವಾರ ಸಂಜೆ ಅಪಾರ್ಟ್‌ಮೆಂಟ್ ನ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುಜಾತ ದೇವಾಡಿಗ ಮಂಗಳವಾರ ಮಧ್ಯಾಹ್ನ ಕಾರ್ಯಕ್ರಮ ಮುಗಿಸಿ ಬಂದವರು ಮನೆಯವರೊಡನೆ ತಲೆನೋವು ಎಂದು ಹೇಳಿ ರೂಮ್ ಬಾಗಿಲು ಹಾಕಿಕೊಂಡಿದ್ದಾರೆ‌. ಆ ಬಳಿಕ ಫ್ಯಾನ್ ಗೆ ಸೀರೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ 8.30 ಆದರೂ ಕೋಣೆಯಿಂದ ಹೊರಗೆ ಬಾರದಿರುವುದನ್ನು ಕಂಡು ಅವರ ಪತಿ ನಿತಿನ್ ಕಿಟಕಿಯಿಂದ ನೋಡಿದಾಗ ಸುಜಾತ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಮೂಲತಃ ಮುಲ್ಕಿ ಎಸ್ ವಿಟಿ ಬಳಿಯ ನಿವಾಸಿಯಾಗಿರುವ ಸುಜಾತ ದೇವಾಡಿಗ ಮುಲ್ಕಿಯಲ್ಲಿ ಓದು ಮುಗಿಸಿ ಉತ್ತಮ ಸ್ಯಾಕ್ರೋಫೋನ್ ಕಲಾವಿದೆಯಾಗಿ ಹೆಸರು ಗಳಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿರುವ ಕಂಕನಾಡಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ