ರಸ್ತೆ ಬದಿ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಹರಿದ ಟ್ರಕ್: ಮೂವರು ಸ್ಥಳದಲ್ಲಿಯೇ ಮೃತ್ಯು

ಚಂಡೀಗಢ: ನಿಯಂತ್ರಣ ತಪ್ಪಿದ ಟ್ರಕ್ ಒಂದು ರಸ್ತೆ ಬದಿಯಲ್ಲಿ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಹರಿದ ಪರಿಣಾಮ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು, 11 ಮಂದಿ ಗಾಯಗೊಂಡಿರುವ ದುರ್ಘಟನೆಯೊಂದು ಹರಿಯಾಣ ರಾಜ್ಯದ ಜಜ್ಜರ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. 

ಜಜ್ಜರ್ ಜಿಲ್ಲೆಯ ಆಸೋಧ ಟೋಲ್ ಪ್ಲಾಝಾದಿಂದ ಸುಮಾರು 2 ಕಿ.ಮೀ. ದೂರದಲ್ಲಿರುವ ಕುಂಡ್ಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಗುರುವಾರ ಮುಂಜಾನೆ ಈ ದುರ್ಘಟನೆ ಸಂಭವಿಸಿದೆ. ಇಲ್ಲಿನ ಸಮೀಪದ ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುಮಾರು 18 ಕಾರ್ಮಿಕರು ಎಕ್ಸ್‌ಪ್ರೆಸ್‌ವೇ ಪಕ್ಕದಲ್ಲಿ ಮಲಗಿದ್ದರು. ಹೀಗೆ ಮಲಗಿದ್ದವರ ಮೇಲೆ ಟ್ರಕ್ ನಿಯಂತ್ರಣ ತಪ್ಪಿ ಹರಿದಿದೆ. ಪರಿಣಾಮ ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳಾದ ಹನ್ನೆರಡು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಗಾಯಾಳುಗಳಲ್ಲಿ ಹತ್ತು ಮಂದಿಯನ್ನು ರೋಹ್ಟಕ್‌ನ ಪಿಜಿಐಎಂಎಸ್‌ಗೆ ಕಳುಹಿಸಲಾಗಿದೆ ಎಂದು  ಎಂದು ಹಿರಿಯ ಪೊಲೀಸ್ ಅಧಿಕಾರಿ ಅಮಿತ್ ಯಶವರ್ಧನ್ ತಿಳಿಸಿದ್ದಾರೆ.  ಪಲ್ಟಿಯಾದ ಟ್ರಕ್ ಹಾಗೂ ವಲಸೆ ಕಾರ್ಮಿಕರ ಮೃತದೇಹದ ದೃಶ್ಯ ಭಯಾನಕವಾಗಿತ್ತು. ಕಾರ್ಮಿಕರ ಗುರುತು ಪತ್ತೆ ಇನ್ನೂ ಆಗಿಲ್ಲ‌. ಆದರೆ ಅವರು ಉತ್ತರ ಪ್ರದೇಶದ ಎರಡು ಜಿಲ್ಲೆಗಳಿಂದ ಬಂದವರು ಎಂದು ತಿಳಿದಿದೆ ಎಂದು ಪೊಲೀಸ್ ಅಧಿಕಾರಿ  ತಿಳಿಸಿದ್ದಾರೆ.