ಪುತ್ತೂರು: ಭೀಕರ ರಸ್ತೆ ಅಪಘಾತಕ್ಕೆ ಸ್ಕೂಟರ್ ಸವಾರ ಬಲಿ: ಮತ್ತೋರ್ವ ಗಂಭೀರ ಗಾಯ

ಮಂಗಳೂರು: ಪುತ್ತೂರಿನ ಬೈಪಾಸ್ ರಸ್ತೆಯ ಉರ್ಲಾಂಡಿ ಎಂಬಲ್ಲಿನ ಮಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಯುವಕ ಮೃತಪಟ್ಟು ಮತ್ತೋರ್ವನು ಗಂಭೀರವಾಗಿ ಗಾಯಗೊಂಡ‌ ಘಟನೆ ನಡೆದಿದೆ.

ಸ್ಕೂಟರ್ ಸವಾರ ಅರಿಯಡ್ಕ ಗ್ರಾಮದ ಜಾರತ್ತಾರು ನಿವಾಸಿ ಸಿನಾನ್ (19) ಮೃತಪಟ್ಟ ದುರ್ದೈವಿ. ಹಿಂಬದಿ ಸವಾರ ಆರ್ಯಾಪು ಗ್ರಾಮದ ಕಲ್ಲರ್ಪೆ ನಿವಾಸಿ ಅಸೀರ್ (18) ಗಂಭೀರ ಗಾಯಗೊಂಡವರು.

ಇಂದು ಮಧ್ಯಾಹ್ನ ವೇಳೆ ಉರ್ಲಾಂಡಿಯಲ್ಲಿ ಸಿನಾನ್ ಹಾಗೂ ಅಸೀರ್ ಸ್ಕೂಟರ್ ನಲ್ಲಿ ಸಂಚರಿಸಿಕೊಂಡು ಬರುತ್ತಿದ್ದರು‌. ಈ ವೇಳೆ ಸ್ಕೂಟರ್ ಗೆ  ಟಿಪ್ಪರ್ ಲಾರಿಯೊಂದು ಢಿಕ್ಕಿ ಹೊಡೆದಿದೆ. ಪರಿಣಾಮ ಸಿನಾನ್ ಸ್ಥಳದಲ್ಲಿಯೇ ಮೃತಪಟ್ಟರೆ, ಅಸೀರ್ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟಿಪ್ಪರ್ ಚಾಲಕನ ಅಜಾಗರೂಕತೆ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಪುತ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುತ್ತೂರು ಸಂಚಾಅರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.