
ಮಂಗಳೂರು: ಹಾಸ್ಟೆಲ್ ನ 4ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಸಾವು
5/04/2022 09:12:00 AM
ಮಂಗಳೂರು: ನಗರದ ಕೊಟ್ಟಾರ ಚೌಕಿಯಲ್ಲಿರುವ ಹಾಸ್ಟೆಲ್ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವನು ಮೃತಪಟ್ಟ ಘಟನೆ ಇಂದು ಮಧ್ಯಾಹ್ನ 3.45ರ ಸುಮಾರಿಗೆ ನಡೆದಿದೆ.
ಬಿಜಾಪುರ ಮೂಲದ, ನಗರದ ಕೊಟ್ಟಾರ ಚೌಕಿಯಲ್ಲಿರುವ ಚೈತನ್ಯ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಣವ್ ಎಸ್.ಮುಂಡಾಸ(18) ಮೃತಪಟ್ಟ ವಿದ್ಯಾರ್ಥಿ.
ಚೈತನ್ಯ ಕಾಲೇಜಿನಲ್ಲಿ ಹಾಸ್ಟೆಲ್ ನಲ್ಲಿದ್ದು ವಿದ್ಯಾರ್ಥಿ ಪ್ರಣವ್ ಎಸ್.ಮುಂಡಾಸ ವ್ಯಾಸಂಗ ಮಾಡುತ್ತಿದ್ದ. ಹಾಸ್ಟೆಲ್ ನಲ್ಲಿ ಕೆಲ ಮಕ್ಕಳು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಕ್ರಿಕೆಟ್ ಬಾಲ್ ಹಾಸ್ಟೆಲ್ ನ ಕಟ್ಟಡದ ಮೇಲೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಬಾಲ್ ಹೆಕ್ಕಲೆಂದು ಪ್ರಣವ್ ಹಾಸ್ಟೆಲ್ ನ ಕಟ್ಟಡದ ತಗಡು ಶೀಟ್ ಮೇಲೆ ಹತ್ತಿದ್ದಾನೆ. ಈ ಸಂದರ್ಭ ಜಾರಿ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದ ಆತ ಗಂಭೀರವಾಗಿ ಗಾಯಗೊಂಡಿದ್ದನು.
ತಕ್ಷಣ ಪ್ರಣವ್ ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.