
ಹಾರ ಹಾಕಿದ ವರನಿಗೆ ಕಪಾಳಮೋಕ್ಷ ಮಾಡಿ ಕಲ್ಯಾಣಮಂಟಪದಿಂದ ಹೊರ ನಡೆದ ವಧು!
4/18/2022 09:06:00 PM
ಲಖನೌ: ಎಲ್ಲಾ ರೀತಿಯಲ್ಲಿ ಮದುವೆಗೆ ತಯಾರಿ ನಡೆಸಲಾಗಿದೆ. ಕಲ್ಯಾಣ ಮಂಟಪದಲ್ಲಿ ಮೂಹೂರ್ತಕ್ಕೆ ಸಿದ್ಧತೆ ನಡೆಯುತ್ತಿದೆ ವಧು - ವರರೂ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಇನ್ನೊಂದೆಡೆ ಕ್ಯಾಮೆರಾಮ್ಯಾನ್ ವಿವಾಹದ ಎಲ್ಲಾ ಕ್ಷಣಗಳನ್ನು ಫೋಟೊ ಮೂಲಕ ಸೆರೆ ಹಿಡಿಯಲು ತಯಾರಾಗಿದ್ದಾರೆ. ಆದರೆ ಈ ವೇಳೆ ಮದುವೆಯ ಮಂಟಪದಲ್ಲಿ ವಧು ಎಸಗಿರುವ ಕೃತ್ಯವೊಂದು ಎಲ್ಲರನ್ನೂ ಒಂದು ಕ್ಷಣಕ್ಕೆ ಆಘಾತಕ್ಕೆ ತಳ್ಳುವಂತೆ ಮಾಡಿದೆ.
ಅಷ್ಟಕ್ಕೂ ಏನಾಯಿತೆಂದರೆ, ವರ ವಧುವಿನ ಕತ್ತಿಗೆ ಹಾರ ಹಾಕಿದ್ದಾನೆ. ಇದರಿಂದ ಕುಪಿತಳಾದ ವಧು, ವರನಿಗೆ ಕಪಾಳಮೋಕ್ಷ ಮಾಡಿ ಕಲ್ಯಾಣ ಮಂಟಪದಿಂದ ಹೊರ ನಡೆದಿದ್ದಾಳೆ. ಇಂತಹದ್ದೊಂದು ವಿಚಿತ್ರ ಘಟನೆ ಉತ್ತರ ಪ್ರದೇಶದ ಹಮೀರ್ಪುರ್ನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೈತುಂಬಾ ಆಭರಣ, ಅದ್ಧೂರಿ ಲೆಹಂಗಾ ಧರಿಸಿದ್ದ ವಧು ಕಲ್ಯಾಣ ಮಂಟಪದಿಂದ ಇಳಿದು ಹೊರ ನಡೆದಾಗ ಅಲ್ಲಿದ್ದ ಅತಿಥಿಗಳು ಅಚ್ಚರಿಯಿಂದ ನೋಡುತ್ತಿದ್ದರು. ಏನು ನಡೆಯುತ್ತಿದೆ ಎಂಬ ಅರಿವೇ ಆಗದೆ ಅವರು ಒಂದು ಕ್ಷಣ ಅವಕ್ಕಾಗಿದ್ದರು. ಆದರೆ ವಧು-ವರನ ನಡುವೆ ಯಾವ ಕಾರಣಕ್ಕೆ ಮನಸ್ತಾಪವಾಗಿದೆ ಎಂಬುದು ತಿಳಿದಿಲ್ಲ. ಆದರೆ, ವಧು ಮಾಡಿದ ಕೆಲಸ ಅಲ್ಲಿದ್ದ ಎಲ್ಲರನ್ನೂ ಮುಜುಗರಕ್ಕೆ ತಳ್ಳಿದೆ. ಇದಾದ ಬಳಿಕ ಎರಡೂ ಕುಟುಂಬಸ್ಥರು ಮಧ್ಯ ಪ್ರವೇಶಿಸಿ ಬಳಿಕ ಒಂದು ಒಪ್ಪಂದದ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.