-->
ನಕಲಿ‌ ವೈದ್ಯ ದಂಪತಿಯ ನಕಲಿ ಐವಿಎಫ್ ಚಿಕಿತ್ಸೆಗೆ ಮಹಿಳೆ ಬಲಿ!

ನಕಲಿ‌ ವೈದ್ಯ ದಂಪತಿಯ ನಕಲಿ ಐವಿಎಫ್ ಚಿಕಿತ್ಸೆಗೆ ಮಹಿಳೆ ಬಲಿ!

ತುಮಕೂರು: ಮಕ್ಕಳಿಲ್ಲದವರಿಗೆ ಮಕ್ಕಳ ಭಾಗ್ಯ ಕಲ್ಪಿಸುವುದಾಗಿ ಭರವಸೆ ನೀಡಿ ಲಕ್ಷಾಂತರ ರೂ. ಹಣ ಪೀಕಿಸಿದ ನಕಲಿ ವೈದ್ಯ ದಂಪತಿಯ ಐವಿಎಫ್ ಚಿಕಿತ್ಸೆಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. 

ತಿಪಟೂರು ತಾಲೂಕಿನ ಬೆಳಗರಹಳ್ಳಿ ಗ್ರಾಮದ ಮಮತಾ (34) ಮೃತ ಮಹಿಳೆ. ಮಮತಾ ಹಾಗೂ ಮಲ್ಲಿಕಾರ್ಜುನ್ ದಂಪತಿಗೆ 15 ವರ್ಷಗಳ ಹಿಂದೆ ವಿವಾಹವಾಗಿತ್ತು. ಆದರೆ ಮಕ್ಕಳಾಗದ ಹಿನ್ನೆಲೆಯಲ್ಲಿ ಹಲವಾರು ಆಸ್ಪತ್ರೆಗಳಿಗೆ ಅಲೆದಾಡಿದ್ದರು. ಈ ವೇಳೆ, ಮಂಡ್ಯ ಮೂಲದ ಮಂಜುನಾಥ್​ ಹಾಗೂ ಉಡುಪಿ ಮೂಲದ ವಾಣಿ ಎಂಬ ನಕಲಿ ವೈದ್ಯ ದಂಪತಿ ಮಮತಾ ಹಾಗೂ ಮಲ್ಲಿಕಾರ್ಜುನ್ ರನ್ನು ಸಂಪರ್ಕಿಸಿದ್ದಾರೆ. ತಮಗೆ ಮಕ್ಕಳಾಗುವಂತೆ ಐವಿಎಫ್ ಚಿಕಿತ್ಸೆ ನೀಡುತ್ತೇವೆ ಎಂದು ನಂಬಿಸಿ 4 ಲಕ್ಷ ರೂ. ಹಣ ಪಡೆದಿದ್ದಾರೆ. 4 ತಿಂಗಳುಗಳ ಕಾಲ ಅವೈಜ್ಞಾನಿಕವಾಗಿ ಐವಿಎಫ್ ಚಿಕಿತ್ಸೆ ನೀಡಿದ್ದಾರೆ. 

ಬಳಿಕ ತಮ್ಮ ಗರ್ಭದಲ್ಲಿ ಮಗು ಬೆಳೆಯುತ್ತಿದೆ ಎಂದು ನಂಬಿಸಿ ಮತ್ತಷ್ಟು ಹಣ ಪೀಕಿದ್ದಾರೆ. ಕೆಲ ದಿನಗಳ ಬಳಿಕ ಮಮತಾ ಹೊಟ್ಟೆ ನೋವಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೇರೆ ಆಸ್ಪತ್ರೆಗೆ ದಾಖಲಾದ ಸಂದರ್ಭ ಈ ನಕಲಿ ವೈದ್ಯರ ಅಸಲಿ ಸತ್ಯ ಬಯಲಾಗಿದೆ.‌ ಈ‌ ಸಂದರ್ಭ ಮಮತಾ ಗರ್ಭಿಣಿಯಾಗಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.

ಬಳಿಕ ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ಮಮತಾ ನಕಲಿ ಚಿಕಿತ್ಸೆಯ ಪರಿಣಾಮವಾಗಿ ಗರ್ಭಕೋಶ, ಕಿಡ್ನಿ, ಹೃದಯ ಹಾಗೂ ಮೆದುಳು ಸಂಬಂಧಿ ಕಾಯಿಲೆಗೆ ತುತ್ತಾಗಿದ್ದಾರೆ. ಬೆಂಗಳೂರು ಸೇಂಟ್ ಜಾನ್ ಆಸ್ಪತ್ರೆ, ತುಮಕೂರಿನ ಶ್ರೀದೇವಿ ಆಸ್ಪತ್ರೆಯಲ್ಲಿ 3 ತಿಂಗಳು ಲಕ್ಷಾಂತರ ರೂ. ಹಣ ಖರ್ಚು ಮಾಡಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ಫಲಕಾರಿಯಾಗದ ಕಾರಣ ಬೇಸತ್ತ ಪತಿ ಮಮತಾರನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು.‌ಆದರೆ ಅಲ್ಲಿ ಶನಿವಾರ ಮಮತಾ ಮೃತಪಟ್ಟಿದ್ದಾರೆ.

ಮಕ್ಕಳು ಬೇಕೆಂಬ ಬಯಕೆಗೆ ನಕಲಿ ವೈದ್ಯ ದಂಪತಿಯ ಮೋಸದ ಜಾಲಕ್ಕೆ ಬಿದ್ದಿರುವ ಮಲ್ಲಿಕಾರ್ಜುನ್ ಹಣ ಹಾಗೂ ಪತ್ನಿಯನ್ನು ಕಳೆದುಕೊಂಡು ಕಣ್ಣೀರಿಡುವಂತಾಗಿದೆ. ನಕಲಿ ವೈದ್ಯ ದಂಪತಿ ತಿಪಟೂರು, ತುರುವೇಕೆರೆ, ಅರಸೀಕೆರೆ ಭಾಗದ ಹಲವಾರು ಗ್ರಾಮಗಳಲ್ಲಿ ಮಕ್ಕಳಿಲ್ಲದ ದಂಪತಿಯಿಂದ ಲಕ್ಷಾಂತರ ರೂ. ಹಣ ಪಡೆದು ಚಿಕಿತ್ಸೆ ನೀಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

ಈ ಬಗ್ಗೆ ನೊಣವಿನಕೆರೆ ಪೊಲೀಸ್​ ಠಾಣೆಯಲ್ಲಿ ನಕಲಿ ವೈದ್ಯ ದಂಪತಿ ವಾಣಿ ಮತ್ತು ಮಂಜುನಾಥ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ವಾಣಿ ಮತ್ತು ಮಂಜುನಾಥ್ ಕೇವಲ ಎಸ್​ಎಸ್​ಎಲ್​ಸಿ ಪಾಸಾಗಿದ್ದು, ಯಾವುದೇ ವೈದ್ಯಕೀಯ ಪದವಿ ಪಡೆದಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ನಕಲಿ ವೈದ್ಯರನ್ನ ಬಂಧಿಸಿದ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100