-->
ಒಂದು ಲೋಟ ಚಹಾ 100 ರೂ.: ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟನ್ನು ಬಿಚ್ಚಿಟ್ಟ ಅಲ್ಲಿನ ನಿವಾಸಿ

ಒಂದು ಲೋಟ ಚಹಾ 100 ರೂ.: ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟನ್ನು ಬಿಚ್ಚಿಟ್ಟ ಅಲ್ಲಿನ ನಿವಾಸಿ

ಕೊಲಂಬೋ: ಶ್ರೀಲಂಕಾದಲ್ಲಿನ  ಆರ್ಥಿಕ ಬಿಕ್ಕಟ್ಟನ್ನು ನೋಡಿದರೆ ನಿಯಂತ್ರಣವನ್ನು ತಪ್ಪಿದಂತೆ ತೋರುತ್ತದೆ. ಇದೀಗ ಥಾಮಸ್​(69) ಎಂಬವರು ಇಂಡಿಯಾ ಟುಡೆಗೆ ಶ್ರೀಲಂಕಾ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 

ಅಲ್ಲಿನ ಜನತೆಯ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಪೆಟ್ರೋಲ್​ ಲಭ್ಯವಾಗುತ್ತಿಲ್ಲ. ಔಷಧಿ​ ಲಭ್ಯವಾಗುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಗ್ಯಾಸ್​ ಸೌಲಭ್ಯ ದೊರಕುತ್ತಿಲ್ಲ. ನನ್ನ ವಯಸ್ಸು 69 ಆದರೆ, ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಘಟನೆಯನ್ನು ನಾನು ನೋಡಿದೆ ಎಂದು ಥಾಮಸ್ ಹೇಳುತ್ತಾರೆ. 

ನಮಗೆ ಇಲ್ಲಿನ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ.  ಸಂಬಳವೂ ಸಿಗುತ್ತಿಲ್ಲ. ಕೈಯಲ್ಲಿ ಹಣ ಹಣವೂ ಇಲ್ಲ. ಹಣವಿದ್ದರೆ, ಅಗತ್ಯ ವಸ್ತುಗಳು ದೊರಕುತ್ತಿಲ್ಲ. ನಾವು ಕೊಲಂಬೋದ ಕೆಲವು ಅಂಗಡಿಗಳಿಗೆ ಹೋದಾಗ ಅವರು ಬೇಳೆ ಇಲ್ಲ, ಅಕ್ಕಿ ಇಲ್ಲ, ಬ್ರೆಡ್ ಇಲ್ಲ ಎಂದು ಹೇಳುತ್ತಾರೆ ಅಥವಾ ಒಂದು ಪೌಂಡ್ ಬ್ರೆಡ್‌ನ ಬೆಲೆ 100 ರೂ‌. ಎನ್ನುತ್ತಾರೆ.

ಒಂದು ಕಪ್ ಚಹಾದ ಬೆಲೆ 100 ರೂ.. ಪ್ರಮುಖ ವಸ್ತುಗಳ ಬೆಲೆಗಳನ್ನು ಕೇಳುವಂತಿಲ್ಲ. ಅಲ್ಲದೆ, ಶ್ರೀಲಂಕಾದಲ್ಲಿ ದೀರ್ಘಾವಧಿಯ ವಿದ್ಯುತ್ ಕಡಿತ ದೇಶದ ಸಂವಹನ ಜಾಲಗಳ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ. 

ಬೃಹತ್ ಸಾಲದ ಬಾಧ್ಯತೆಗಳು ಮತ್ತು ಕ್ಷೀಣಿಸುತ್ತಿರುವ ವಿದೇಶಿ ಮೀಸಲುಗಳೊಂದಿಗೆ ಶ್ರೀಲಂಕಾವು ತನ್ನ ಆಮದುಗಳಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಇಂಧನ ಸೇರಿದಂತೆ ಹಲವಾರು ಸರಕುಗಳ ಕೊರತೆಗೆ ಇದು ಕಾರಣವಾಗಿದೆ. ಅಲ್ಲದೆ, ಕೋವಿಡ್ -19 ಸಾಂಕ್ರಾಮಿಕವು ಶ್ರೀಲಂಕಾದ ಆರ್ಥಿಕತೆಗೆ ಭಾರೀ ಹೊಡೆತವನ್ನು ನೀಡಿದೆ. ಕಳೆದ 2 ವರ್ಷಗಳಲ್ಲಿ ಸರ್ಕಾರವು 14 ಬಿಲಿಯನ್ ಡಾಲರ್​ ನಷ್ಟವನ್ನು ಅಂದಾಜಿಸಿದೆ. ಇನ್ನು ಲಂಕಾದಲ್ಲಿ ಉದ್ಧವಿಸಿರುವ ಆರ್ಥಿಕ ಬಿಕ್ಕಟ್ಟನ್ನು ವಿರೋಧಿಸಿ ಶ್ರೀಲಂಕಾದ ಜನರು ಬೀದಿಗಿಳಿದಿದ್ದಾರೆ. ಶುಕ್ರವಾರ, ಕೋಪಗೊಂಡ ಪ್ರತಿಭಟನಾಕಾರರು ಅಧ್ಯಕ್ಷ ಗೊತಬಯ ರಾಜಪಕ್ಸೆ ಅವರ ನಿವಾಸದ ಬಳಿ ಪ್ರತಿಭಟನೆ ನಡೆಸಿದ್ದಾರೆ. 

ಅಲ್ಲದೆ ಅವರು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು. ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಎರಡು ಸೇನಾ ಬಸ್‌ಗಳಿಗೆ ಕಲ್ಲೆಸೆಯಲಾಗಿದೆ. ಒಂದು ಬಸ್ ಗೆ ಬೆಂಕಿ ಹಚ್ಚಲಾಯಿತು. ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿ 54 ಜನರನ್ನು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಲಂಕಾ ಅಧ್ಯಕ್ಷರು ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ಎಲ್ಲ ಅಧಿಕಾರವನ್ನು ರಕ್ಷಣಾ ಪಡೆಗಳಿಗೆ ನೀಡಿದ್ದಾರೆ. ಎಪ್ರಿಲ್ 3 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article