ಬಂಟ್ವಾಳ: ಹಾಡಹಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವುಗೈದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೋಲೀಸರು ಬಂಧಿಸಿದ್ದಾರೆ.
ಅರಳ ಗ್ರಾಮದ ಶುಂಠಿಹಿತ್ಲು ನಿವಾಸಿ ಅಶ್ರಫ್ (42) ಬಂಧಿತ ಆರೋಪಿ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿರುವ ಪೊಲೀಸರು ಆರೋಪಿಯನ್ನು ಸೋರ್ನಡು ಎಂಬಲ್ಲಿ ಬಂಧಿಸಿದ್ದಾರೆ.
ಜನವರಿ 31ರಂದು ಅರಳ ಗ್ರಾಮದ ಪೋರ್ಕಳ ನಿವಾಸಿ ಅಬ್ದುಲ್ ರಹಮಾನ್ ಎಂಬವರ ಮನೆಯಲ್ಲಿ ಹಾಡಹಗಲೇ ಕಳವು ನಡೆದಿತ್ತು. ಮನೆ ಮಂದಿ ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಮದುವೆ ತೆರಳಿದ್ದರು. ಮನೆಯಲ್ಲಿ ಯಾರು ಇರದಿರುವುದನ್ನು ಕಂಡು ಹೊಂಚು ಹಾಕಿ ಆರೋಪಿ ಮನೆಯೊಳಗೆ ನುಗ್ಗಿದ.ಆ ಬಳಿಕ ಕೋಣೆಗೆ ನುಗ್ಗಿ ಕಪಾಟು ಬೀಗ ಮುರಿದು 2 ಲಕ್ಷ ರೂ. ಮೌಲ್ಯದ 5.50 ಪವನ್ ನೆಕ್ಲೆಸ್ ಸರವನ್ನು ಕಳವು ಮಾಡಿದ್ದ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಈ ಪ್ರಕರಣದ ಬಗ್ಗೆ ಕಾರ್ಯಚರಣೆ ನಡೆಸಿರುವ ಬಂಟ್ವಾಳ ಗ್ರಾಮಾಂತರ ಪೋಲೀಸರು ಆರೋಪಿಯನ್ನು ಸೋರ್ನಾಡು ಎಂಬಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.