ಪತಿಯ ಹತ್ಯೆಗೆ ಉದ್ಯಮ ಪಾಲುದಾರರೊಂದಿಗೆ ಸೇರಿ ಎರಡನೇ ಪತ್ನಿಯೇ ಸುಪಾರಿ ನೀಡಿದಳು: ಮೂವರು ಅರೆಸ್ಟ್

ಬೆಳಗಾವಿ: ನಗರದ ಮಂಡೋಳಿ ರಸ್ತೆಯಲ್ಲಿ ಮಾರ್ಚ್​ 15ರಂದು  ನಡೆದಿದ್ದ ಉದ್ಯಮಿಯೊಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಹತ್ಯೆಯ ಹಿಂದೆ ಉದ್ಯಮಿಯ ಎರಡನೇ ಪತ್ನಿ ಹಾಗೂ ಉದ್ಯಮದ ಪಾಲುದಾರರಿದ್ದಾರೆಂಬ ಸತ್ಯ ಬಹಿರಂಗಗೊಂಡಿದೆ. 

ಬೆಳಗಾವಿಯ ಉದ್ಯಮಿ ರಾಜು ದೊಡ್ಡಬೊಮ್ಮನವರ್ (41) ಕೊಲೆಯಾದವರು. 

ರಾಜು ದೊಡ್ಡಬೊಮ್ಮನವರ್ ಅವರಿಗೆ ಮಂಡೋಳಿ ರಸ್ತೆಯಲ್ಲಿ ಕಣ್ಣಿಗೆ ಕಾರದ ಪುಡಿ ಎರಚಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಶಶಿಕಾಂತ್ ಶಂಕರಗೌಡ, ಧರ್ಮೇಂದ್ರ ಘಂಟಿ ಹಾಗೂ ಎರಡನೇ ಪತ್ನಿ ಕಿರಣ ದೊಡ್ಡಬೊಮ್ಮನವರ್ (26) ಎಂದು ಗುರುತಿಸಲಾಗಿದೆ. 

ಮೊದಲ ಮದುವೆಯನ್ನು ಮುಚ್ಚಿಟ್ಟು ಕಿರಣ ಜೊತೆಗೆ ರಾಜು ದೊಡ್ಡಬೊಮ್ಮನವರ್ ಎರಡನೇ ವಿವಾಹವಾಗಿದ್ದರು. ಆದರೆ, ಉದ್ಯಮದಲ್ಲಿ ಬಂದಂತಹ ಲಾಭವನ್ನು ಎರಡನೇ ಪತ್ನಿಗೆ ಹಾಗೂ ಪಾಲುದಾರರೊಂದಿಗೆ ರಾಜು ಹಂಚಿಕೊಳ್ಳುತ್ತಿರಲಿಲ್ಲ ಎಂಬ ಆರೋಪವಿದೆ. ಹೀಗಾಗಿ ರಾಜು ಹಾಗೂ ಪಾಲುದಾರರ ನಡುವೆ ವೈಷಮ್ಯ ಶುರುವಾಗಿತ್ತು. ಪರಿಣಾಮ ಮೂವರೂ ಸೇರಿ ರಾಜು ಕೊಲೆ ಮಾಡಲು 10 ಲಕ್ಷ ರೂ. ಸುಪಾರಿ ಕೊಟ್ಟಿದ್ದರು ಎಂದು ತಿಳಿದುಬಂದಿದೆ. 

ಅಲ್ಲದೆ, ರಾಜು ಕೊಲೆಯಾದ ದಿನ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ತಾನೇನು ಮಾಡೇ ಇಲ್ಲ ಎಂಬಂತೆ ಕಿರಣ ನಟಿಸಿದ್ದಳು. ರಾಜು ದೊಡ್ಡಬೊಮ್ಮನವರ್ ಮೂರು ಮಂದಿಯನ್ನು ವಿವಾಹವಾಗಿದ್ದ. ಇವರಲ್ಲಿ ಎರಡನೇ ಪತ್ನಿ ಕಿರಣ ಸುಪಾರಿ ನೀಡಿದ್ದಳು. ಸದ್ಯ ಕಿರಣ ಸೇರಿ ಮೂವರನ್ನು ಬಂಧಿಸಲಾಗಿದೆ. ಉಳಿದ ಕೊಲೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸರಿಂದ ತನಿಖೆ ಮುಂದುವರಿದೆ.