ಬೆಂಗಳೂರು: ಪೈಲಟ್ ಆಗಬೇಕೆಂದು ಗುರಿ ಇಟ್ಟುಕೊಂಡಿದ್ದ ಬಾಲಕಿಯೋರ್ವಳು ರಸ್ತೆ ಅಪಘಾತಕ್ಕೆ ಬಲಿಯಾದ ದುರ್ಘಟನೆ ಇಂದು ನಡೆದಿದೆ.
ಖಾಸಗಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 13 ವರ್ಷದ ಅಕ್ಷಯಾ ಮೃತಪಟ್ಟ ಬಾಲಕಿ. ಇಂದು ಮಧ್ಯಾಹ್ನ ಹೆಬ್ಬಾಳ ಪೊಲೀಸ್ ಠಾಣೆಯ ಮುಂಭಾಗದ ಅಂಡರ್ ಪಾಸ್ನಲ್ಲಿ ಮಳೆ ನೀರು ತುಂಬಿತ್ತು. ಈ ಬಗ್ಗೆ ಬಿಬಿಎಂಪಿ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಪಾದಚಾರಿಗಳು ಮುಖ್ಯರಸ್ತೆ ಮೂಲಕ ರೋಡ್ ಕ್ರಾಸ್ ಮಾಡಬೇಕಾಗಿತ್ತು. ಮತ್ತಿಕೆರೆಯಲ್ಲಿ ವಾಸವಾಗಿದ್ದ ಅಕ್ಷಯಾ ರಸ್ತೆ ದಾಟುತ್ತಿದ್ದ ಸಂದರ್ಭ ಬಿಬಿಎಂಪಿ ಕಸದ ಲಾರಿ ಯಮನ ರೂಪದಲ್ಲಿ ಆಕೆ ಮೇಲೆ ಹರಿದಿದೆ. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಅಲ್ಲಿಗೆ ಆಕೆಯ ಪೈಲಟ್ ಆಗಬೇಕೆಂಬ ಕನಸು ನುಚ್ಚು ನೂರಾಗಿದೆ.
ಪೈಲಟ್ ಆಗಬೇಕೆಂದು ಪ್ರತಿದಿನ ಇಷ್ಟಪಟ್ಟು ಓದ್ತಿದ್ದ ಬಾಲಕಿ ಅಕ್ಷಯಾ, 10ನೇ ತರಗತಿ ಪುಸ್ತಕ ತರುತ್ತೇನೆಂದು ಹೇಳಿ ಮನೆಯಿಂದ ಹೊರಬಂದಿದ್ದಳಂತೆ. ಇದೀಗ ಆಕೆ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾಳೆ.