ಬರೋಬ್ಬರಿ 3 ತಿಂಗಳ ಬಳಿಕ ಕೋಮಾದಿಂದ ಹೊರಬಂದ ಯುವಕ!

ಭಾರತೀನಗರ: ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಸತತ ಐದು ತಿಂಗಳ ಕಾಲ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸಿದ್ದ ಯುವಕನನ್ನು ಮದ್ದೂರು ತಾಲೂಕು ಭಾರತೀನಗರದ ಜಿ.ಮಾದೇಗೌಡ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ಮರು ಜೀವ ನೀಡಿ ಬದುಕಿಸಿದ್ದಾರೆ.

ಮೂಲತಃ ಗಡಿ ಗ್ರಾಮದ ಮುತ್ತತ್ತಿ ನಿವಾಸಿ ರಘು(32) ಎಂಬ ಯುವಕ ಬದುಕಿ ಬಂದಾತ. ಈತ ಕಳೆದ ವರ್ಷ ನವೆಂಬರ್‌ ನಲ್ಲಿ ತನ್ನ ಬೈಕ್‌ನಲ್ಲಿ ಬನ್ನೂರು ಕಡೆ ತೆರಳುತ್ತಿದ್ದ.‌ ಈ ವೇಳೆ ಆತ ಸವಾರಿ ಮಾಡುತ್ತಿದ್ದ ಬೈಕ್ ಗೆ ಕಾರೊಂದು ಢಿಕ್ಕಿ ಹೊಡೆದು ನಿಲ್ಲದೆ ಪರಾರಿಯಾಗಿತ್ತು. ಅಪಘಾತದ ರಭಸಕ್ಕೆ ರಸ್ತೆಗೆ ಬಿದ್ದ ರಘು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರಿಗೆ ಮಂಡ್ಯ ಆಸ್ಪತ್ರೆ, ಮೈಸೂರಿನ ಖಾಸಗಿ ಆಸ್ಪತೆಗಳಲ್ಲಿ ಚಿಕಿತ್ಸೆ ಪಡೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅವರು ಕೋಮಾ ಸ್ಥಿತಿಗೆ ತೆರಳಿದ್ದರು. ಆದರೆ ರಘುನನ್ನು ಉಳಿಸಿಬೇಕೆಂದು ಅವರ ಸಹೋದರ ರಕ್ಷಿತ್‌ ಕೊನೆಗೆ ಭಾರತೀನಗರದ ಜಿ.ಮಾದೇಗೌಡ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದ್ದರು.

ಈ ಆಸ್ಪತ್ರೆಯ ವೈದ್ಯ ಸಮೂಹ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿತ್ತು. ಗಾಯಾಳು ರಘು ಅವರ ಟೆಂಪೋರಲ್‌ ಭಾಗದಲ್ಲಿ (ತಲೆಯ ಭಾಗ) ಎರಡು ಬಾರಿ ಶಸ್ತ್ರ ಚಿಕಿತ್ಸೆ ನಡೆಸಿ ಕೊನೆಗೂ ಅವರಿಗೆ ಪ್ರಜ್ಞೆ ಮರುಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ರಘು ತನ್ನವರನ್ನು ಗುರುತಿಸುವುದಲ್ಲದೇ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವುದು‌ ಮನೆಯರಿಗೂ ವೈದ್ಯರಿಗೂ ಸಂತಸ ತರಿಸಿದೆ.