
ಕಳವು ನಾಟಕವಾಡಿ ಮಾಲಕನ 18 ಲಕ್ಷ ರೂ. ಎಗರಿಸಿರುವ ಕಾರು ಚಾಲಕ ಸೇರಿದಂತೆ ಮತ್ತೋರ್ವ ಅಂದರ್
3/04/2022 08:48:00 PM
ಶಿವಮೊಗ್ಗ: ಅಡಿಕೆ ಖರೀದಿಸಲು ನೀಡಿರುವ 18 ಲಕ್ಷ ರೂ. ಎಗರಿಸಿ ಮಾಲಕನ ನಂಬಿಕೆಗೆ ದ್ರೋಹ ಎಸಗಿದ್ದ ಕಾರು ಚಾಲಕ ಸೇರಿದಂತೆ ಇಬ್ಬರು ಆರೋಪಿಗಳನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರೇಕಂದವಾಡಿ ಗ್ರಾಮದ ಅಡಿಕೆ ವ್ಯಾಪಾರಿಯೊಬ್ಬರು ಭದ್ರಾವತಿ ತಾಲೂಕು ಹೊಸಕೊಪ್ಪ ಗ್ರಾಮದ ವ್ಯಕ್ತಿಯಿಂದ ಅಡಿಕೆ ಖರೀದಿಸಲೆಂದು ತಮ್ಮ ಕಾರು ಚಾಲಕ ಅನಿಲ್ ಎಂಬಾತನಿಗೆ 18 ಲಕ್ಷ ರೂ. ನೀಡಿ ಕಳುಹಿಸಿದ್ದರು. ಅದರಂತೆ ಅನಿಲ್ ಬೊಲೆರೂ ಕಾರ್ ನಲ್ಲಿ ಮೂವರು ಕೆಲಸಗಾರರೊಂದಿಗೆ ಹೊಸಕೊಪ್ಪ ಗ್ರಾಮಕ್ಕೆ ಬಂದಿದ್ದನು. ಅಲ್ಲಿ ಅನಿಲ್ ವಾಹನ ನಿಲ್ಲಿಸಿ ಮೂವರು ಕೆಲಸಗಾರರೊಂದಿಗೆ ಊಟಕ್ಕೆ ಹೋಗಿದ್ದಾನೆ. ಊಟ ಮುಗಿಸಿ ವಾಪಸ್ ಬರುವಷ್ಟರಲ್ಲಿ ವಾಹನದಲ್ಲಿದ್ದ ಹಣವನ್ನು ಯಾರೋ ಎಗರಿಸಿದ್ದರು. ಅಲ್ಲಿ ಎಲ್ಲಾ ಕಡೆಗಳಲ್ಲಿ ಸಾಕಷ್ಟು ಹುಡುಕಾಟ ನಡೆಸಿದರೂ ಹಣ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಕಾರು ಚಾಲಕ ಅನಿಲ್ ತಮ್ಮ ಮಾಲಕರಿಗೆ ಮಾಹಿತಿ ನೀಡಿದ್ದಾನೆ. ತಕ್ಷಣ ಅವರು ಹೊಸಕೊಪ್ಪಕ್ಕೆ ಬಂದು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಡಿಕೆ ವ್ಯಾಪಾರಿ ಸೇರಿದಂತೆ ಚಾಲಕ ಅನಿಲ್ ಹಾಗೂ ಮೂವರು ಕೆಲಸಗಾರರು ಮತ್ತು ಗೋಪಾಲಯ್ಯರನ್ನು ಸಹ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಅಡಿಕೆ ವ್ಯಾಪಾರಿ ತನ್ನ ಕಾರು ಚಾಲಕ ಹಾಗೂ ಮೂವರು ಕೆಲಸಗಾರರ ಮೇಲೆ ಅನುಮಾನ ವ್ಯಕ್ತಪಡಿಸಿಲ್ಲ. ಅವರು ನಿಷ್ಠಾವಂತರು ಎಂದೇ ಹೇಳಿದ್ದರು. ಆದರೆ, ಪೊಲೀಸರಿಗೆ ವಿಚಾರಣೆ ವೇಳೆ ಚಾಲಕ ಅನಿಲ್ ಮೇಲೆ ಅನುಮಾನ ಮೂಡಿ ಸರಿಯಾಗಿ ವಿಚಾರಣೆ ಮಾಡಿದಾಗ ಆತ ತಾನೇ ಹಣ ಎಗರಿಸಿರುವುದಾಗಿ ಬಾಯಿ ಬಿಟ್ಟಿದ್ದಾನೆ.
ತಾನು ಹಾಗೂ ಬಲೆಗೆಹಿರೇಕಂದವಾಡಿ ಗ್ರಾಮದ ನಾಗರಾಜ್ ಜೊತೆ ಸೇರಿ ಹಣ ಕಳವು ನಾಟಕವಾಡಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಅನಿಲ್ ಮತ್ತು ಪಂಚರ್ ಅಂಗಡಿಯ ನಾಗರಾಜ್ ಇವರಿಬ್ಬರೂ ಸೇರಿ ಹಣ ಕದಿಯುವ ಬಗ್ಗೆ ಪ್ಲಾನ್ ಮಾಡಿದ್ದರು. ಅದರಂತೆ ಅನಿಲ್ ವಾಹನವನ್ನು ನಾಗರಾಜ್ ಹಿರೇಕಂದವಾಡಿಯಿಂದ ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದು ವಾಹನದಲ್ಲಿದ್ದ ಹಣವನ್ನು ಎಗಿರಿಸಿದ್ದಾನೆ. ಇದೀಗ ಇಬ್ಬರನ್ನು ಬಂಧಿಸಿರುವ ಪೊಲೀಸರು 18 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.