ಅಮೃತ್ಸರ: ಪಂಜಾಬ್ ಚುನಾವಣೆಗೆ ಇನ್ನು ಕೆಲವೇ ದಿನವಷ್ಟೇ ಇದೆ. ಮತದಾರರ ಓಲೈಕೆಗಾಗಿ ಎಲ್ಲಾ ಪಕ್ಷಗಳು ಕೊನೆಯ ಕ್ಷಣದ ಕಸರತ್ತು ನಡೆಸುತ್ತಿವೆ. ಈಗಾಗಲೇ ಕಾಂಗ್ರೆಸ್ ತನ್ನ ಸಿಎಂ ಅಭ್ಯರ್ಥಿಯನ್ನೂ ಘೋಷಣೆ ಮಾಡಿದೆ.
ಹಾಲಿ ಸಿಎಂ ಚರಂಜಿತ್ ಸಿಂಗ್ ಚನ್ನಿ ಅವರೇ ನಮ್ಮ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಣೆ ಮಾಡುವ ಮೂಲಕ, ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರನ್ನು ಕೆಂಡಾಮಂಡಲ ಆಗುವಂತೆ ಮಾಡಿದೆ. ಈ ನಡುವೆ ಸಿಧು ಪುತ್ರಿ ರುಬಿಯಾ ಹೇಳಿಕೆಯೊಂದನ್ನು ನೀಡಿದ್ದು, ಇದೀಗ ಈ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಪ್ರಚಾರ ಸಮಯದಲ್ಲಿ ಆಕೆ ಹಾಲಿ ಸಿಎಂ ಚನ್ನಿ ಅವರನ್ನು ಪರೋಕ್ಷವಾಗಿ ತಿವಿಯುತ್ತಲೇ ತಂದೆಯ ಪರವಾಗಿ ಮಾತನಾಡಿದ್ದಾರೆ. ಅಲ್ಲದೆ ತಂದೆ ಗೆಲ್ಲುವವರೆಗೂ ತಾನು ಮದುವೆ ಆಗುವುದಿಲ್ಲವೆಂದು ತಿಳಿಸಿದ್ದಾರೆ. ಪಂಜಾಬ್ ಸದ್ಯ ಬಹಳ ಕೆಟ್ಟ ಪರಿಸ್ಥಿತಿಯಲ್ಲಿದೆ. ಈ ನಿಟ್ಟಿನಲ್ಲಿ ತನ್ನ ತಂದೆ ಮಾತ್ರ ರಾಜ್ಯವನ್ನು ಉಳಿಸುವಂತಹ ಏಕೈಕ ವ್ಯಕ್ತಿಯಾಗಿದ್ದಾರೆ. ಆದರೆ ಅವರನ್ನು ರಾಜಕೀಯ ವಿರೋಧಿಗಳು ತುಳಿಯುವ ಯತ್ನ ಮಾಡುತ್ತಿದ್ದಾರೆ. ಇಲ್ಲಿನ ಡ್ರಗ್ ಮಾಫಿಯಾ ಹಾಗೂ ಮರಳು ಮಾಫಿಯಾವನ್ನು ಕೊನೆಗಣಿಸೆಂದು ಪ್ರಯತ್ನಿಸುತ್ತಿರುವ ನಮ್ಮ ತಂದೆ ವಿರುದ್ಧ ಷಡ್ಯಂತ್ರ ರಚಿಸಲಾಗುತ್ತಿದೆ. ಅವರು ಬಹಳ ಪ್ರಾಮಾಣಿಕ ವ್ಯಕ್ತಿ ಎಂದು ರುಬಿಯಾ ಹೇಳಿದ್ದಾರೆ.
ಕಾಂಗ್ರೆಸ್ ಸಿಎಂ ಅಭ್ಯರ್ಥಿ ಚರಂಜಿತ್ ಸಿಂಗ್ ಚನ್ನಿಯವರನ್ನು ಬಡವರೆಂದು ಬಣ್ಣಿಸಲಾಗುತ್ತಿದೆ. ಆದರೆ ಅವರ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದರೆ 133 ಕೋಟಿ ರೂ.ಗೂ ಅಧಿಕ ಹಣ ಪತ್ತೆಯಾಗಲಿದೆ. ಹಣದ ಕೊರತೆಯಿಂದ ಪುತ್ರಿಯ ಮದುವೆ ಆಗುವುದಿಲ್ಲ ಎಂದು ನನ್ನ ತಂದೆ ಸಿಧು ಭಾವನಾತ್ಮಕವಾಗಿ ಹೇಳಿದ್ದರು. ಆದರೆ ಈಗ ನಾನು ಹೇಳುತ್ತಿದ್ದೇನೆ, ತಂದೆಯ ಗೆಲುವಿನ ಬಳಿಕವೇ ನಾನು ಮದುವೆಯಾಗುತ್ತೇನೆ ಎಂದಿದ್ದಾರೆ.
ಕಳೆದ 14 ವರ್ಷಗಳಿಂದ ಪಂಜಾಬ್‌ಗಾಗಿ ತನ್ನ ತಂದೆ ಕೆಲಸ ಮಾಡುತ್ತಿದ್ದಾರೆ. ಅವರು ಪಂಜಾಬ್ ಗೆ ಹೊಸ ಮಾದರಿಯನ್ನು ರಚಿಸುತ್ತಿದ್ದಾರೆ. ಆದ್ದರಿಂದ ಅವರನ್ನು ಗೌರವಿಸಬೇಕು. ಅವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ, ಆದರೆ ಇತರ ರಾಜಕಾರಣಿಗಳು ಹಣದ ಆರೋಪಕ್ಕೆ ಒಳಗಾಗುವುದು ಸಾಮಾನ್ಯವಾಗಿದೆ ಎಂದರು.