ಟೆಕ್ ದೈತ್ಯ ಗೂಗಲ್ ನಲ್ಲಿ ಕೆಲಸ ಗಿಟ್ಟಿಸಿಕೊಂಡ ಯುವಕ: ಈತನ ಸಂಬಳವೆಷ್ಟು ಗೊತ್ತೇ

ವಿಜಯವಾಡ: ಆಂಧ್ರಪ್ರದೇಶ ರಾಜ್ಯದ ವಿಶಾಖಪಟ್ಟಣ ಮೂಲದ ಯುವಕನೋರ್ವನು ಟೆಕ್​ ದೈತ್ಯ ಗೂಗಲ್ ಸಂಸ್ಥೆಯಲ್ಲಿ ಸಾಫ್ಟ್​ವೇರ್​ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಮುಂದೆ ಅವರು ಗೂಗಲ್​ ಇಂಡಿಯಾದ ಬೆಂಗಳೂರು ಕಂಪೆನಿಯಲ್ಲಿ ಕೆಲಸ ಮಾಡಲಿದ್ದಾರೆ. 

ಜಯಂತಿ ವಿಷ್ಣು ಯಶ್​ ಗೂಗಲ್ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಂಡವರು. ಈ ಹಿಂದೆ ಇವರು ವಾರ್ಷಿಕ 8.50 ಲಕ್ಷ ರೂ. ಸಂಬಳದೊಂದಿಗೆ ಬಹುರಾಷ್ಟ್ರೀಯ ಆಕ್ಸೆಂಚರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಗೂಗಲ್​ನಲ್ಲಿ ಅವರು ವಾರ್ಷಿಕ 47.50 ಲಕ್ಷ ರೂ. ಸಂಬಳದ ಉದ್ಯೋಗ ಗಿಟ್ಟಿಸಿದ್ದಾರೆ. ಈ ಮೂಲಕ‌ ಅವರು ಒಂದೇ ಬಾರಿಗೆ ಬರೋಬ್ಬರಿ 40 ಲಕ್ಷ ರೂ. ಹೆಚ್ಚಿನ ಸಂಬಳದ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. 

ಯಶ್, ಹಿಮಾಚಲ ಪ್ರದೇಶದ ಹಮೀರ್‌ಪುರದ ಎನ್‌ಐಟಿಯ ಇಸಿಇಯಲ್ಲಿ ತಮ್ಮ ಇಂಜಿನಿಯರಿಂಗ್ ವ್ಯಾಸಂಗವನ್ನು ಪೂರೈಸಿದ್ದರು. ಕೋರ್ಸ್ ಮುಗಿದ ಬಳಿಕ ಅವರು ಮೊದಲ ಬಾರಿಗೆ ಆಕ್ಸೆಂಚರ್‌ನಲ್ಲಿ ಸ್ಥಾನ ಪಡೆದರು. ಇತ್ತೀಚೆಗಷ್ಟೇ ಗೂಗಲ್​ನಲ್ಲಿ ನಡೆದ ಸಂದರ್ಶನಕ್ಕೆ ಹಾಜರಾಗಿ ಲೆವೆಲ್-4 ಸೀನಿಯರ್ ಇಂಜಿನಿಯರ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಮಾರ್ಚ್ 7 ರಂದು ಬೆಂಗಳೂರಿನ ಗೂಗಲ್​ ಕಂಪೆನಿಯಲ್ಲಿ ಯಶ್ ಕೆಲಸ ಆರಂಭಿಸಲಿದ್ದಾರೆ. ಯಶ್​ ತಂದೆ ಸತ್ಯನಾರಾಯಣ ಮೂರ್ತಿ ನಿವೃತ್ತ ಉದ್ಯೋಗಿ ಮತ್ತು ತಾಯಿ ವೇದವಲ್ಲಿ ಗೃಹಿಣಿ. ಅವರು ವಿಶಾಖಪಟ್ಟಣಂ ಸಮೀಪದ ನರಸೀಪಟ್ಟಣಂ ಪಟ್ಟಣದ ವೇಲಮಾ ವೀಧಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಯಶ್‌ಗೆ ಗೂಗಲ್‌ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಅವರ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.