
ಅಳಿಯನನ್ನೇ ವಾಹನ ಢಿಕ್ಕಿ ಮಾಡಿ ಗರ್ಭಿಣಿ ಪುತ್ರಿ ಬಾಳು ಬರಡು ಮಾಡಿದ ಮಾಜಿ ಕಾರ್ಪೊರೇಟರ್ ಸೇರಿದಂತೆ ನಾಲ್ವರು ಅರೆಸ್ಟ್
2/24/2022 08:01:00 AM
ವಿಜಯಪುರ: ಪ್ರೇಮಿಗಳ ದಿನದಂದೇ ಅಳಿಯನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಮಾಜಿ ಕಾರ್ಪೋರೇಟರ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ.
ಮನೆಯವರ ವಿರೋಧದ ಮಧ್ಯೆಯೂ ಮಗಳು ಆಕೆಯ ಪ್ರಿಯಕರನನ್ನೇ ಮದ್ವೆಯಾಗಿದ್ದಾಳೆನ್ನುವ ಕಾರಣಕ್ಕೆ ಕಾರ್ಪೊರೇಟರ್ ರವೂಫ್ ಶೇಖ್ ಎಂಬಾತ ತನ್ನ ಅಳಿಯ ಪಿಎಸ್ಐ ಪುತ್ರ ಮುಸ್ತಕಿನ್ ಕೂಡಗಿ(28)ಯನ್ನೇ ಹತ್ಯೆಗೈದಿದ್ದಾನೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಮ್ಮ ಪುತ್ರಿ 5 ತಿಂಗಳ ಗರ್ಭಿಣಿ ಎನ್ನುವುದನ್ನೂ ಮರೆತು ಹೆತ್ತ ಮಗಳ ಬಾಳಿಗೆ ಕೊಳ್ಳಿ ಇಟ್ಟಿದ್ದಾನೆ.
ಮೃತ ಮುಸ್ತಕಿನ್ ಕೂಡಗಿ ತಂದೆ ಗಾಂಧಿಚೌಕ್ ಪೊಲೀಸ್ ಠಾಣೆಯ ಕ್ರೈಂ ವಿಭಾಗದ ಪಿಎಸ್ಐ ರಿಯಾಜ್ ಅಹಮದ್. ಇವರ ಸಂಬಂಧಿಯೇ ಆಗಿದ್ದ ರವೂಫ್ ಶೇಖ್ರ ಪುತ್ರಿ ಆತೀಕಾರನ್ನು ಮುಸ್ತಕಿನ್ ಕೂಡಗಿ ಪ್ರೀತಿಸುತ್ತಿದ್ದ. ಇಬ್ಬರೂ ಎರಡೂವರೆ ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. ಇದಕ್ಕೆ ಆತೀಕಾ ತಂದೆ ಒಪ್ಪಿರಲಿಲ್ಲ. ವಿರೋಧದ ನಡುವೆಯೂ ಪ್ರೇಮಿಗಳಿಬ್ಬರೂ 6 ತಿಂಗಳ ಹಿಂದೆಯಷ್ಟೇ ಮದುವೆಯಾಗಿ ಮಹಾರಾಷ್ಟ್ರದಲ್ಲಿ ನೆಲೆಸಿದ್ದರು. ಗರ್ಭಿಣಿಯಾಗಿದ್ದ ಪತ್ನಿಯನ್ನು ಇತ್ತೀಚಿಗೆ ಊರಿಗೆ ವಾಪಸ್ ಕರೆದುಕೊಂಡು ಬಂದಿದ್ದ ಮುಸ್ತಕಿನ್ ಕೂಡಗಿ ತನ್ನ ಮನೆಯಲ್ಲೇ ವಾಸವಿದ್ದರು.
ಆದರೆ ಫೆ.14ರಂದು ಹಾಡಹಗಲೇ ವಿಜಯಪುರ ನಗರ ಹೊರವಲಯದ ರೇಡಿಯೋ ಕೇಂದ್ರದ ಬಳಿ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ನಿರ್ಮಾಣ ಹಂತದಲ್ಲಿರುವ ತಮ್ಮ ಮನೆ ಬಳಿಗೆ ಬೈಕ್ನಲ್ಲಿ ಮುಸ್ತಕಿನ್ ಕೊಡಗಿ ತೆರಳುತ್ತಿದ್ದರು. ಈ ವೇಳೆ ಬೈಕ್ಗೆ ಬುಲೆರೋ ವಾಹನವನ್ನು ಡಿಕ್ಕಿ ಹೊಡೆಸಿ, ಬಳಿಕ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರೀತಿಸಿ ಮದುವೆಯಾದ ಬಳಿಕ ಮುಸ್ತಕಿನ್ನ ಕೊಲೆಗೆ ಹಲವು ಬಾರಿ ಯತ್ನ ನಡೆದಿತ್ತಂತೆ.
ಮದ್ವೆಯಾದ ಹೊಸತರಲ್ಲಿ ವೀಡಿಯೋ ಮಾಡಿದ್ದ ಅತೀಕಾ, 'ತನ್ನ ತಂದೆ ಹಾಗೂ ಸಹೋದರರಿಂದ ಪತಿ ಮುಸ್ತಕೀನ್ ಹಾಗೂ ಅವರ ಕುಟುಂಬಕ್ಕೆ ಜೀವ ಬೆದರಿಕೆಯಿದೆ. ಆದ್ದರಿಂದ ತನಗೂ, ಮುಸ್ತಕಿನ್ ಹಾಗೂ ತನ್ನ ಮಾವನ ಕುಟುಂಬಕ್ಕೆ ರಕ್ಷಣೆ ನೀಡಿ' ಎಂದು ಅಳಲು ತೋಡಿಕೊಂಡಿದ್ದರು. ಅಲ್ಲದೆ 'ದಯವಿಟ್ಟು ತಮ್ಮನ್ನು ಬದುಕಲು ಬಿಡಿ' ಎಂದು ತಂದೆಯನ್ನು ಬೇಡಿಕೊಂಡಿದ್ದಳು.
ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಂಧಿ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆರಂಭದಲ್ಲಿ ಇದೊಂದು ಅಪಘಾತ ಎಂದೇ ತಿಳಿಯಲಾಗಿತ್ತು. ಆದರೆ, ಕೂಲಂಕುಷವಾಗಿ ತನಿಖೆ ನಡೆಸಿದ ಬಳಿಕ ಇದೊಂದು ಉದ್ದೇಶ ಪೂರ್ವ ಕೃತ್ಯ ಎಂಬುದು ಕಂಡುಬಂದಿದೆ.