-->
ಮಂಗಳೂರು: ಆಕಾಶಭವನ ಶರಣ್, ಪಿಂಕಿ‌ನವಾಜ್ ಗೂಂಡಾ ಕಾಯ್ದೆಯಡಿ ಅರೆಸ್ಟ್

ಮಂಗಳೂರು: ಆಕಾಶಭವನ ಶರಣ್, ಪಿಂಕಿ‌ನವಾಜ್ ಗೂಂಡಾ ಕಾಯ್ದೆಯಡಿ ಅರೆಸ್ಟ್

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇಬ್ಬರು ಆರೋಪಿಗಳ ಮೇಲೆ ಗೂಂಡಾ ಕಾಯ್ದೆಯಡಿ ಬಂಧನ ಮಾಡಿ ಮಾಡಲಾಗಿದೆ. ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ತಮ್ಮ  ಅಧಿಕಾರವನ್ನು ಬಳಸಿಕೊಂಡು ಈ ಗೂಂಡಾ ಕಾಯ್ದೆಯನ್ನು ಜಾರಿಗೊಳಿಸಿದ್ದಾರೆ.

ಸಮಾಜ ವಿದ್ರೋಹಿ ಕೃತ್ಯ ಹಾಗೂ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ನಿಟ್ಟಿನಲ್ಲಿ ಗೂಂಡಾ ಕಾಯ್ದೆ ಜಾರಿಯಾಗಿದೆ. ನಗರದ ಆಕಾಶಭವನ ನಿವಾಸಿ ರೋಹಿದಾಸ್ ಅಲಿಯಾಸ್ ಆಕಾಶ್ ಭವನ್ ಶರಣ್, ಸುರತ್ಕಲ್ ನಿವಾಸಿ ಪಿಂಕ್ ನವಾಜ್ ಮೇಲೆ ಗೂಂಡಾ ಕಾಯ್ದೆ ಜಾರಿಯಾಗಿದೆ.

ಆಕಾಶಭವನ ಶರಣ್ ಮೇಲೆ 20 ಕ್ಕೂ ಅಧಿಕ ಅಪರಾಧ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ ಕೊಲೆ, ಕೊಲೆ ಯತ್ನ, ರೇಪ್, ಪೊಕ್ಸೊ ಪ್ರಕರಣ, ದರೋಡೆ, ಸುಲಿಗೆ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿದೆ. ಆತನ ಮೇಲೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 15 ಪ್ರಕರಣ, ದ.ಕ ಜಿಲ್ಲೆಯಲ್ಲಿ 2, ಉಡುಪಿಯಲ್ಲಿ 2 ಪ್ರಕರಣ ದಾಖಲಾಗಿದೆ. 

ಇತ್ತೀಚೆಗೆ ಬಂಟ್ವಾಳದಲ್ಲಿ ಸುರೇಂದ್ರ ಬಂಟ್ವಾಳ ಎಂಬಾತನ ಕೊಲೆ ಹಿನ್ನೆಲೆಯಲ್ಲಿ ಆತನ ಬಂಧನವಾಗಿದೆ. ಆರೋಪಿ ಆಕಾಶಭವನ ಶರಣ್ ಮೇಲೆ ನಗರದ 4ಕ್ಕೂ ಅಧಿಕ ಠಾಣೆಯಲ್ಲಿ ರೌಡಿಶೀಟರ್ ಖಾತೆ ತೆರೆಯಲಾಗಿದೆ. ಇದೀಗ ಆತ ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿದ್ದಾನೆ. ಆಕಾಶಭವನ ಶರಣ್ ಜೈಲಿನಲ್ಲಿದ್ದುಕೊಂಡೇ ಹಲವು ಪ್ರಕರಣಗಳಿಗೆ ಕುಮ್ಮಕ್ಕು ನೀಡಿರುವ ಆರೋಪದ ಮೇಲೆ ಗೂಂಡಾ ಕಾಯ್ದೆ ಜಾರಿಯಾಗಿದೆ.

ಮತ್ತೋರ್ವ ಸುರತ್ಕಲ್ ನ ಕಾಟಿಪಳ್ಳ ನಿವಾಸಿ ಮಹಮ್ಮದ್ ನವಾಝ್ ಅಲಿಯಾಸ್ ಪಿಂಕಿ ನವಾಝ್  ನನ್ನ ಗೂಂಡಾ ಕಾಯ್ದೆಯಡಿ ಬಂಧನ ಮಾಡಲಾಗಿದೆ. ಪಿಂಕಿ ನವಾಜ್ ಮೇಲೆ 2015ರಲ್ಲಿ  ಮೊದಲ ಪ್ರಕರಣ ದಾಖಲಾಗಿತ್ತು. ಆ ಬಳಿಕ ಮಂಗಳೂರು ನಗರ ಪೊಲೀಸದ ವ್ಯಾಪ್ತಿಯಲ್ಲಿ 12 ಪ್ರಕರಣ, ದ.ಕ ಜಿಲ್ಲೆಯಲ್ಲಿ 1 ಪ್ರಕರಣ ದಾಖಲಾಗಿದೆ. ಸುರತ್ಕಲ್ ಪರಿಸರದಲ್ಲಿ ಈತ ತನ್ನ ಸಹಚರರೊಂದಿಗೆ ವಾಟ್ಸ್ಆ್ಯಪ್ ಗ್ರೂಪ್ ರಚಿಸಿ ಕೋಮು ಸಾಮರಸ್ಯ ಹಾಳು ಮಾಡುವ ಹುನ್ನಾರ ನಡೆಸಿದ್ದ. ಸ್ಥಳೀಯ ಕಾರ್ಪೊರೇಟರ್ ಕೊಲೆಗೆ ಸಂಚು, ಕೊಲೆಯತ್ನಕ್ಕೆ  ಹುನ್ನಾರ ನಡೆಸಿದ್ದ. ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ ಬಂಧಿಯಯಾಗಿದ್ದ ಪಿಂಕಿ ನವಾಜ್ ನಿನ್ನೆ ಬಿಡುಗಡೆಗೊಂಡಿದ್ದ‌. ಇದೀಗ ಗೂಂಡಾ ಕಾಯ್ದೆಯಡಿ ಮಂಗಳೂರು ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ‌.

Ads on article

Advertise in articles 1

advertising articles 2

Advertise under the article