ಲಕ್ನೋ ವಿವಿಯ ಮುಸ್ಲಿಂ ವಿದ್ಯಾರ್ಥಿನಿಗೆ ಸಂಸ್ಕೃತದಲ್ಲಿ 5 ಚಿನ್ನದ ಪದಕ

ಲಕ್ನೋ: ತರಗತಿಯಲ್ಲಿ ಹಿಜಾಬ್‌ ಧರಿಸಿಯೇ ಪಾಠ ಕೇಳುತ್ತೇವೆ ಎಂಬ ಗಲಾಟೆ ಮಧ್ಯೆಯೇ ಉತ್ತರ ಪ್ರದೇಶದ ಲಕ್ನೋ ವಿವಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯೋರ್ವಳು ಸಂಸ್ಕೃತ ಭಾಷೆಯಲ್ಲಿ ಐದು ಚಿನ್ನದ ಪದಕ ಪಡೆದು ಸ್ನಾತಕೋತ್ತರ ಪದವಿ ಪೂರ್ತಿಗೊಳಿಸಿದ್ದಾರೆ.

ಲಕ್ನೋ ವಿವಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿ ಘಜಾಲಾಗೆ ಕಳೆದ ವರ್ಷ ನವೆಂಬರ್‌ನಲ್ಲೇ ಸ್ನಾತಕೋತ್ತರ ಪದವಿಯಲ್ಲಿ ಅತ್ಯುತ್ತಮ ಸಾಧಕಿ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಆದರೆ ಗುರುವಾರ ಉಪನ್ಯಾಸಕರ ನಡುವೆ ನಡೆದ ಕಾರ್ಯಕ್ರಮದಲ್ಲಿ ಆಕೆಗೆ ಐದು ಪದಕಗಳನ್ನು ಪ್ರದಾನ ಮಾಡಲಾಯಿತು.

ಕೆಲವು ವರ್ಷಗಳ ಹಿಂದೆ ಘಜಲಾ ತಂದೆ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ಈಕೆಯ ಇಬ್ಬರು ಸಹೋದರರು, ಒಬ್ಬ ಸಹೋದರಿಯ ಪೈಕಿ ಘಜಾಲಾ ಮಾತ್ರ ಶಿಕ್ಷಣವನ್ನು ಮುಂದುವರಿಸಿದ್ದರು. ಇದೀಗ ಆಕೆ ಲಕ್ನೋ ವಿವಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿ ಸಂಸ್ಕೃತ ಭಾಷೆಯಲ್ಲಿ ಐದು ಚಿನ್ನದ ಪದಕ ಪಡೆದು ಸ್ನಾತಕೋತ್ತರ ಪದವಿ ಪಡೆದಿದ್ದಾಳೆ.