-->

ವಾಟ್ಸ್ಆ್ಯಪ್‌ ಗ್ರೂಪ್‌ ನ ಅಡ್ಮಿನ್‌ ಹಾಗೂ ಸದಸ್ಯ ಸ್ಥಾನದಿಂದ ವಜಾ: ಹೈಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ

ವಾಟ್ಸ್ಆ್ಯಪ್‌ ಗ್ರೂಪ್‌ ನ ಅಡ್ಮಿನ್‌ ಹಾಗೂ ಸದಸ್ಯ ಸ್ಥಾನದಿಂದ ವಜಾ: ಹೈಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ

ಬೆಂಗಳೂರು: ವಾಟ್ಸ್ಆ್ಯಪ್‌ ಗ್ರೂಪ್‌ ನ ಅಡ್ಮಿನ್‌ ಹಾಗೂ ಸದಸ್ಯ ಸ್ಥಾನದಿಂದ ತೆಗೆದುಹಾಕಿ ಗ್ರೂಪ್ ನಿಂದ ಹೊರಹಾಕಿರುವುದನ್ನು ವಿರೋಧಿಸಿ ವ್ಯಕ್ತಿಯೊಬ್ಬರು ಖಾಸಗಿ ಟ್ರಸ್ಟ್‌ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಬಡವರು ಮತ್ತು ನಿರ್ಗತಿಕರ ಸೇವೆಗೆಂದು ಸ್ಥಾಪನೆ ಮಾಡಲಾಗಿರುವ 'ದಿ ರಾಬಿನ್‌ ಹುಡ್‌ ಪ್ರಾಜೆಕ್ಟ್ ಟ್ರಸ್ಟ್’ಗೆ ಸಂಬಂಧಿಸಿ ವಾಟ್ಸ್ಆ್ಯಪ್‌ ಗ್ರೂಪ್‌ಗಳನ್ನು ಸ್ಥಾಪಿಸಲಾಗಿತ್ತು. ಇದರ 10 ವಾಟ್ಸ್ಆ್ಯಪ್‌ ಗ್ರೂಪ್‌ಗಳ ಅಡ್ಮಿನ್‌ ಹಾಗೂ ಸದಸ್ಯ ಸ್ಥಾನದಿಂದ ತಮ್ಮನ್ನು ತೆಗೆದುಹಾಕಿರುವುದನ್ನು ಆಕ್ಷೇಪಿಸಿರುವ ಬೆಂಗಳೂರಿನ ಗುರಪ್ಪನಪಾಳ್ಯದ ನಿವಾಸಿ ಮೊಹಮ್ಮದ್‌ ಶರೀಫ್‌ ಹೈಕೋರ್ಟ್‌ಗೆ ತಕರಾರು ಅರ್ಜಿಯನ್ನು ಸಲ್ಲಿಸಿದ್ದಾರೆ.

ಟ್ರಸ್ಟ್‌ನ ಸೇವಾ ಕಾರ್ಯಗಳನ್ನು ಬಡವರು ಹಾಗೂ ನಿರ್ಗತಿಕರಿಗೆ ತಲುಪಿಸುವ ಕೆಲಸದಲ್ಲಿ ತೊಡಿಸಿಕೊಂಡಿದ್ದ ತನ್ನನ್ನು, ಸುಳ್ಳು ಆರೋಪದ ಮೇಲೆ ವಾಟ್ಸ್ಆ್ಯಪ್‌ ಗ್ರೂಪ್ ನಿಂದ ಹೊರಹಾಕಲಾಗಿದೆ. ಆದ್ದರಿಂದ ಸುಳ್ಳು ಆರೋಪ ಹೊರಿಸಿ ಮಾನನಷ್ಟ ಉಂಟು ಮಾಡಿರುವುದಕ್ಕೆ ಪ್ರತಿಯಾಗಿ ನಷ್ಟ ಪರಿಹಾರ ನೀಡಬೇಕು. ಅದೇ ರೀತಿ ವಾಟ್ಸ್ಆ್ಯಪ್‌ ಗ್ರೂಪ್‌ಗೆ ಮತ್ತೆ ತನ್ನನ್ನು ಸೇರಿಸಲು ಟ್ರಸ್ಟ್‌ಗೆ ನಿರ್ದೇಶನ ನೀಡುವಂತೆ ಕೋರಿ ಶರೀಫ್‌ ಅರ್ಜಿಯಲ್ಲಿ ಕೋರಿದ್ದರು. ಅವರು ಟ್ರಸ್ಟ್‌ ಹಾಗೂ ಅದರ ಸಂಸ್ಥಾಪಕರು, ಟ್ರಸ್ಟಿಗಳು, ಮುಂಬೈ, ಬೆಂಗಳೂರು, ನವದೆಹಲಿಯ ತಂಡದ ಸ್ವಯಂ ಸೇವಕರನ್ನು ಪ್ರತಿವಾದಿ ಮಾಡಿದ್ದರು.

ಆದರೆ, ಶರೀಫ್‌ ಮನವಿಯನ್ನು ಪುರಸ್ಕರಿಸಲು ನಿರಾಕರಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಅರ್ಜಿದಾರರು ಸಿವಿಲ್‌ ಅಥವಾ ಇತರೆ ನ್ಯಾಯಾಲಯದಲ್ಲಿ ತಮ್ಮ ಈ ಕುಂದುಕೊರತೆಗೆ ಪರಿಹಾರ ಕಂಡುಕೊಳ್ಳುಬಹುದು ಎಂದು ಸೂಚಿಸಿ ಅರ್ಜಿ ಇತ್ಯರ್ಥಪಡಿಸಿದೆ.

'ದಿ ರಾಬಿನ್‌ ಹುಡ್‌ ಪ್ರಾಜೆಕ್ಟ್ ಟ್ರಸ್ಟ್‌' ತನ್ನ ಸ್ವಯಂ ಸೇವಕರ ಸದಸ್ಯತ್ವ ಹೊಂದಿದ 10 ವಾಟ್ಸ್ಆ್ಯಪ್‌ ಗ್ರೂಪ್‌ ರಚನೆ ಮಾಡಿಕೊಂಡಿತ್ತು. ಗ್ರೂಪ್ ನಲ್ಲಿ ಅರ್ಜಿದಾರ ಶರೀಫ್ 2018ರ ಫೆಬ್ರವರಿಯಿಂದ ಸದಸ್ಯರಾಗಿದ್ದರು. ಎರಡೂವರೆ ವರ್ಷಕ್ಕಿಂತ ಹೆಚ್ಚು ಕಾಲ ಅಡ್ಮಿನ್‌ ಆಗಿದ್ದರು. ಈ ಮಧ್ಯೆ ಟ್ರಸ್ಟ್‌ಗೆ ಸೇರಿದ್ದ ಯುನೈಟೆಡ್‌ ಕಿಂಗ್‌ಡಮ್‌ (ಯುಕೆ) ತಂಡವು ವಿಚಾರವೊಂದರ ಸಂಬಂಧ ಅನಿಸಿಕೆ ಹಂಚಿಕೊಂಡಿತ್ತು. ಈ ಬಗ್ಗೆ ಮಾತನಾಡಿರುವ ಕಾರಣವನ್ನು ಮುಂದಿಟ್ಟುಕೊಂಡು ಅರ್ಜಿದಾರನನ್ನು ಗ್ರೂಪ್ ನ ಅಡ್ಮಿನ್‌ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಸ್ವಲ್ಪ ದಿನಗಳ ಬಳಿಕ ಟ್ರಸ್ಟ್‌ಗೆ ಸಂಬಂಧಿಸಿರುವ ಯೋಜನೆಯ ಮಾಹಿತಿಯನ್ನು ಸಾರ್ವಜನಿಕ ವೇದಿಕೆಯಲ್ಲಿ ಹಂಚಿಕೊಂಡ ಆರೋಪದ ಮೇಲೆ 10 ವಾಟ್ಸ್ಆ್ಯಪ್‌ ಗ್ರೂಪ್‌ನಿಂದಲೂ ಅರ್ಜಿದಾರರನ್ನು ತೆಗೆದು ಹಾಕಲಾಗಿತ್ತು.

ಇದನ್ನು ಆಕ್ಷೇಪಿಸಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ ಶರೀಫ್‌, ಟಸ್ಟ್‌ ಗೆ ಸಂಬಂಧಿಸಿರುವ ಯೋಜನೆಯ ಯಾವುದೇ ಮಾಹಿತಿಯನ್ನು ತಾವು ಸಾರ್ವಜನಿಕ ವೇದಿಕೆಯಲ್ಲಿ ಹಂಚಿಕೊಂಡಿಲ್ಲ. ತಮ್ಮ ಮೇಲೆ ಸುಳ್ಳು ಆರೋಪ ಮಾಡಿ ವಾಟ್ಸ್ಆ್ಯಪ್‌ ಗ್ರೂಪ್ ನಿಂದ ತಮ್ಮನ್ನು ತೆಗೆದು ಹಾಕಲಾಗಿದೆ. ಈ ಮೂಲಕ ತನ್ನ ಮೂಲಭೂತ ಹಕ್ಕು ಅದರಲ್ಲೂ ವಾಕ್‌ ಸ್ವಾತಂತ್ರ್ಯ ಹರಣ ಮಾಡಲಾಗಿದೆ. ಆದ್ದರಿಂದ ಮತ್ತೆ ತಮ್ಮನ್ನು ವಾಟ್ಸ್ಆ್ಯಪ್ ಗ್ರೂಪಿಗೆ ಸೇರಿಸಬೇಕು. ಸುಳ್ಳು ಆರೋಪ ಹೊರಿಸಿ ಮಾನನಷ್ಟ ಮಾಡಿರುವುದಕ್ಕೆ ನಷ್ಟ ಪರಿಹಾರ ತುಂಬಿಕೊಡಲು ಟ್ರಸ್ಟ್‌ ಮತ್ತದರ ಸಂಸ್ಥಾಪಕರು, ಟ್ರಸ್ಟಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.

Ads on article

Advertise in articles 1

advertising articles 2

Advertise under the article