ಸುಲಿಗೆಯಾಗಿದೆ ಎಂದು ದೂರು ಕೊಟ್ಟಾತನೇ ಅಪರಾಧಿ : ರೈಲ್ವೆ ಟಿಕೆಟ್ ಕರ್ಕ್ ರೂಪಿಸಿದ್ದ ಸಂಚು ನೋಡಿ ಪೊಲೀಸರೇ ಶಾಕ್

ಚೆನ್ನೈ: ತಮಿಳುನಾಡು ರಾಜ್ಯದ  ತಿರುವನ್ಮಿಯೂರ್ ರೈಲು ನಿಲ್ದಾಣದಲ್ಲಿ ನಡೆದಿರುವ ರೈಲ್ವೆ ನೌಕರನ ದರೋಡೆ ಪ್ರಕರಣದ ತನಿಖೆ ನಡೆಸಿರುವ ಪೊಲೀಸರೇ ಶಾಕ್ ಆಗಿದ್ದಾರೆ. ಏಕೆಂದರೆ ದೂರು  ನೀಡಿರುವಾತನೇ ಅಪರಾಧಿ ಎಂಬುದು ತನಿಖೆಯಿಂದ ಬಯಲಾಗಿದೆ. ಇದೀಗ ರೈಲ್ವೇ ನೌಕರ ನೀಡಿರುವ ದೂರು ಸುಳ್ಳೆಂದು ತಿಳಿದುಬಂದಿದೆ. ರೈಲ್ವೆ ನೌಕರ ಹಾಗೂ ಆತನ ಪತ್ನಿ ಹಣಕ್ಕಾಗಿ ಇಡೀ ಕೃತ್ಯವನ್ನು ಹೆಣೆದಿದ್ದಾರೆ. 

ತಿರುವನ್ಮಿಯೂರ್ ರೈಲು ನಿಲ್ದಾಣದ ಟಿಕೆಟ್​ ಕ್ಲರ್ಕ್​ ರಾಜಸ್ಥಾನ ಮೂಲದ ತೀಕರಂ (28) ಹಾಗೂ ಆತನ ಪತ್ನಿ ಸರಸ್ವತಿ (27) ಎಂಬುವವರನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. 

ಬೆಳಗಿನ ಜಾವದ ಮೊದಲ ರೈಲಿಗೆ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರು ಹೊರಗಿನಿಂದ ಟಿಕೆಟ್​ ಕೌಂಟರ್​ ಕೊಠಡಿ ಲಾಕ್​ ಆಗಿದೆ‌. ಟಿಕೆಟ್​ ಕ್ಲರ್ಕ್​ ನಿಲ್ದಾಣದಿಂದ ನಾಪತ್ತೆಯಾಗಿತ್ತು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಲಾಕ್​ ತೆರೆದು ನೋಡಿದಾಗ ಟಿಕೆಟ್​ ಕ್ಲರ್ಕ್ ತೀಕರಂ ಒಳಗಡೆ ಇದ್ದ. ಆದರೆ, ಆತನ ಕೈ ಕಾಲು ಕಟ್ಟಿ, ಬಟ್ಟೆಯಿಂದ ಬಾಯನ್ನು ಮುಚ್ಚಲಾಗಿತ್ತು. ತಕ್ಷಣ ಆತನನ್ನು ಬಿಡಿಸಿ ವಿಚಾರಣೆ ನಡೆಸಿದಾಗ ಬೆಳಗ್ಗಿನ ಜಾವ ಮೂವರು ವ್ಯಕ್ತಿಗಳು ಬಂದು ತನ್ನನ್ನು ಹೆದರಿಸಿ, ಕಟ್ಟಿಹಾಕಿ ಕೌಂಟರ್​ನಲ್ಲಿದ್ದ 1.30 ಲಕ್ಷ ರೂ. ಹಣವನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಹೇಳಿದ್ದ.

ರೈಲು ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಇಲ್ಲದಿರುವುದರಿಂದ ಏನು ನಡೆದಿದೆ ಎಂದು ತಿಳಿದುಕೊಳ್ಳುವುದು ಪೊಲೀಸರಿಗೆ ಕೊಂಚ ಕಷ್ಟವಾಯಿತು. ಆದರೂ ನಿಲ್ದಾಣದ ಸಮೀಪದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ ಮಹಿಳೆಯೊಬ್ಬಳು ನಿಲ್ದಾಣದ ಏರಿಯಾದಿಂದ ಕೆಳಗೆ ಹೋಗುತ್ತಿರುವ ದೃಶ್ಯ ಹಾಗೂ ಬ್ಯಾಗ್​  ನೊಂದಿಗೆ ಆಕೆ ಆಟೋದಲ್ಲಿ ಮತ್ತೆ ಮರಳಿದ ದೃಶ್ಯ ದಾಖಲಾಗಿತ್ತು.

ಆಟೋ ಚಾಲಕನನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ಮಹಿಳೆ ಉರಪಕ್ಕಮ್​ ಬಳಿ ಇಳಿಸಿದ್ದಾಗಿ ಹೇಳಿದ. ಇದೇ ಏರಿಯಾದಲ್ಲಿಯೇ ತೀಕರಂ ಮನೆಯು ಇತ್ತು. ಇದರಿಂದ ಅನುಮಾನಗೊಂಡ ಪೊಲೀಸರು ತೀಕರಂ ಹಾಗೂ ಆತನ ಪತ್ನಿಯನ್ನು ವಶಕ್ಕೆ ಪಡೆದು ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ. ಆಗ ಇಬ್ಬರೂ ತಾವೇ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಕದ್ದ ಹಣವನ್ನು ತೀಕರಂ ಮನೆಯ ಹಿಂಭಾಗದ ಬಾವಿಯಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸರ ಪ್ರಕಾರ ತೀಕರಂ ಯಾವಾಗಲೂ ಆನ್​ಲೈನ್​ ಗೇಮ್​ಗಳನ್ನು ಆಡುತ್ತಿದ್ದ. ಆದ್ದರಿಂದ 2.50 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಹೀಗಾಗಿ ಸಾಲ ತೀರಿಸಲು ಸುಲಿಗೆ ಮಾಡುವ ಪ್ಲ್ಯಾನ್​ ಅನ್ನು ದಂಪತಿ ರೂಪಿಸಿದ್ದರು. ಪ್ಲಾನ್​ನಂತೆ ಸುಲಿಗೆ ಮಾಡಿ, ತೀಕರಂ ಸಿಕ್ಕಿಬಿದ್ದಿದ್ದಾರೆ. ಕಳೆದ 5 ವರ್ಷದಿಂದ ಆತ ರೈಲ್ವೇ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ.