ಸೈನಾ ನೆಹ್ವಾಲ್ ವಿರುದ್ಧ ಅಶ್ಲೀಲ ಕಮೆಂಟ್: ನಟ ಸಿದ್ಧಾರ್ಥ್ ಟ್ವಿಟರ್ ಖಾತೆ ನಿರ್ಬಂಧಕ್ಕೆ ಮಹಿಳಾ ಆಯೋಗ ಆಗ್ರಹ

ನವದೆಹಲಿ: ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬಗ್ಗೆ ಅಶ್ಲೀಲವಾಗಿ ಟ್ವೀಟ್‌ ಮಾಡಿರುವ ನಟ ಸಿದ್ಧಾರ್ಥ್ ಖಾತೆಯನ್ನು ನಿರ್ಬಂಧಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗವು ಟ್ವಿಟರ್‌ ಸಂಸ್ಥೆಯನ್ನು ಕೇಳಿಕೊಂಡಿದೆ. ಅಲ್ಲದೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಮಹಾರಾಷ್ಟ್ರ ಪೊಲೀಸರಿಗೆ ರಾಷ್ಟ್ರೀಯ ಮಹಿಳಾ ಆಯೋಗ ಪತ್ರ ಬರೆದಿದೆ.

ಪ್ರಧಾನಿ ಮೋದಿಯವರ ಪಂಜಾಬ್ ಭೇಟಿಯ ಸಂದರ್ಭದ ಭದ್ರತಾ ಲೋಪದ ಕುರಿತು ಸೈನಾ ನೆಹ್ವಾಲ್ ಹೇಳಿಕೆಗೆ ಸಿದ್ಧಾರ್ಥ್ ಅವರು ಕಾಮೆಂಟ್ ಮಾಡಿದ್ದಾರೆ. ಅವರ ಈ ಟ್ವೀಟ್ ಸೈನಾ ಅಭಿಮಾನಿಗಳು ಹಾಗೂ ನೆಟ್ಟಿಗರನ್ನು ಕೆಂಡಾಮಂಡಲವಾಗಿಸಿದೆ.

ಈ ಮೂಲ ನಟ ಸಿದ್ಧಾರ್ಥ್ ಹೇಳಿಕೆಯು ಸ್ತ್ರೀದ್ವೇಷದಿಂದ ಕೂಡಿದ್ದು, ಮಹಿಳೆಯ ನಮ್ರತೆಯನ್ನು ಆಕ್ರೋಶಗೊಳಿಸಿದೆ. ಇದು ಮಹಿಳೆಯರ ಘನತೆಗೆ ಅಗೌರವ ಹಾಗಯ ಅವಮಾನವನ್ನು ಉಂಟು ಮಾಡಿದೆ. ಇಂತಹ ಅಶ್ಲೀಲ ಮತ್ತು ಅನುಚಿತ ಹೇಳಿಕೆಯನ್ನು ಆಯೋಗವು ಖಂಡಿಸುತ್ತದೆ. ಈ ವಿಷಯದಲ್ಲಿ ಸ್ವಯಂಪ್ರೇರಿತವಾಗಿ ಗಮನಹರಿಸಬೇಕೆಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿಕೊಂಡಿದೆ.

ತಮ್ಮ ಟ್ವೀಟ್ ಕುರಿತ ಆಕ್ರೋಶಕ್ಕೆ ಪ್ರತಿಕ್ರಿಯಿಸಿರುವ ಸಿದ್ಧಾರ್ಥ್, “ನಾನು ಯಾರ ಬಗ್ಗೆಯೂ ಅಗೌರವಯುತವಾದ ಯಾವುದನ್ನೂ ಬರೆದಿಲ್ಲ, ಹೇಳಿಲ್ಲ ಮತ್ತು ಪ್ರೇರೇಪಿಸಿಲ್ಲ” ಎಂದು ಹೇಳಿದ್ದಾರೆ.

ಸೈನಾ ನೆಹ್ವಾಲ್ ಪ್ರತಿಕ್ರಿಯಿಸಿ , “ಸಿದ್ಧಾರ್ಥ್ ಏನು ಹೇಳಿದ್ದಾರೆಂದು ನನಗೆ ಅರ್ಥವಾಗಲಿಲ್ಲ. ನಾನು ಅವರನ್ನು ಓರ್ವ ನಟನಾಗಿ ಇಷ್ಟಪಡುತ್ತಿದ್ದೆ. ಆದರೆ ಅವರ ಈ ರೀತಿಯ ಮಾತು ಅವರಿಗೆ ಶೋಭೆ  ತರುವಂತದ್ದಲ್ಲ. ಅವರು ಉತ್ತಮ ಪದಗಳೊಂದಿಗೆ ಅವರ ಕಮೆಂಟ್ಸ್ ತಿಳಿಸಬಹುದಿತ್ತು. ಅಂತಹ ಪದಗಳು ಮತ್ತು ಕಾಮೆಂಟ್‌ಗಳ ಬಗ್ಗೆ ನೀವು ಗಮನಹರಿಸಿದ್ದೀರಿ. ಭಾರತದ ಪ್ರಧಾನಿಯ ಭದ್ರತೆಯು ಒಂದು ಸಮಸ್ಯೆಯಾಗಿದ್ದರೆ, ದೇಶದಲ್ಲಿ ಯಾವುದು ಸುರಕ್ಷಿತವಾಗಿದೆ ಎಂದು ನನಗೆ ಖಚಿತವಿಲ್ಲ'' ಎಂದಿದ್ದಾರೆ.

ಸೈನಾ ತಂದೆ ಹರ್ವಿರ್ ಸಿಂಗ್ ಪ್ರತಿಕ್ರಿಯಿಸಿ , ”ಯಾವುದೇ ವಿವಾದದಲ್ಲಿ ಸಿಲುಕದ ಸೈನಾ ವಿರುದ್ಧ ಯಾರೂ ಈ ರೀತಿಯ ಹೇಳಿಕೆಯನ್ನು ನೀಡುವುದು ಅಷ್ಟೊಂದು ಸರಿಯಲ್ಲ. ಒಳ್ಳೆಯ ಅಭಿರುಚಿಯಿಲ್ಲದ ಇಂತಹ ಕಮೆಂಟ್‌ಗಳು ಸ್ವೀಕಾರಾರ್ಹವಲ್ಲ" ಎಂದಿದ್ದಾರೆ.

ಸೈನಾ ಪತಿ ಬ್ಯಾಡ್ಮಿಂಟನ್ ಆಟಗಾರ ಪಾರುಪಳ್ಳಿ ಕಶ್ಯಪ್ ಅವರು ಸಿದ್ಧಾರ್ಥ್ ಅವರ ಟ್ವೀಟ್ ಅನ್ನು ಖಂಡಿಸಿದ್ದಾರೆ. "ಇದು ನಮ್ಮನ್ನು ಅಸಮಾಧಾನಗೊಳಿಸಿದೆ. ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಆದರೆ ಉತ್ತಮ ಪದಗಳನ್ನು ಆರಿಸಿಕೊಳ್ಳಿ ಎಂದು ಕಶ್ಯಪ್ ಟ್ವೀಟ್ ಮಾಡಿದ್ದಾರೆ.‌