-->

ಹಿಂದೂ ದೇವಾಲಯಗಳ ಸ್ವಾಯತ್ತತೆಯನ್ನು ವಿರೋಧಿಸುವ ಕಾಂಗ್ರೆಸ್ ಅಲ್ಪಸಂಖ್ಯಾತರ ಮತದ ಆಸೆಯಿಂದ ಇಡೀ ಹಿಂದೂ ಸಮಾಜಕ್ಕೆ ದ್ರೋಹ ಮಾಡುತ್ತಿದೆ: ನಳಿನ್ ಕುಮಾರ್ ಕಟೀಲು

ಹಿಂದೂ ದೇವಾಲಯಗಳ ಸ್ವಾಯತ್ತತೆಯನ್ನು ವಿರೋಧಿಸುವ ಕಾಂಗ್ರೆಸ್ ಅಲ್ಪಸಂಖ್ಯಾತರ ಮತದ ಆಸೆಯಿಂದ ಇಡೀ ಹಿಂದೂ ಸಮಾಜಕ್ಕೆ ದ್ರೋಹ ಮಾಡುತ್ತಿದೆ: ನಳಿನ್ ಕುಮಾರ್ ಕಟೀಲು

ಮಂಗಳೂರು: ಸಿಎಂ ಬಸವರಾಜ ಬೊಮ್ಮಾಯಿಯವರು ಹಿಂದೂ  ದೇವಾಲಯಗಳಿಗೆ ಸ್ವಾಯತ್ತತೆ ನೀಡುವ ಉತ್ತಮ ಯೋಜನೆಯನ್ನು ಜಾರಿಗೊಳಿಸುತ್ತಿದ್ದಾರೆ. ಆದರೆ ಇದರಲ್ಲಿ ರಾಜಕಾರಣ ಮಾಡುವ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಸಂಪೂರ್ಣವಾಗಿ ಹಿಂದೂ ವಿರೋಧಿ‌ ನೀತಿಯನ್ನು ಅನುಸರಿಸುತ್ತಿದ್ದು, ಮತಾಂತರ, ಸಿಎಎ, ಹಿಂದೂ ದೇವಸ್ಥಾನಗಳಿಗೆ ಸ್ವಾಯತ್ತತೆ ಈ ಎಲ್ಲಾ ವಿಚಾರದಲ್ಲೂ ವಿರೋಧಿಸುವ ಕಾರ್ಯ ಮಾಡುತ್ತಿದೆ. ಈ ಮೂಲಕ ಕಾಂಗ್ರೆಸ್ ಅಲ್ಪಸಂಖ್ಯಾತರ ಮತದ ಆಸೆಯಿಂದ ಇಡಿ ಹಿಂದೂ ಸಮಾಜಕ್ಕೆ ದ್ರೋಹ ಮಾಡುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಆರೋಪಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಹಿಂದೂ ಸಮಾಜವನ್ನು ಒಡೆದು ಆಳುವ ಕೆಲಸವನ್ನು ಮಾಡುತ್ತಿದೆ. ಕಾಂಗ್ರೆಸ್​ಗೆ ಹಿಂದೂ ಸಮಾಜ, ಧರ್ಮದ ಮೇಲೆ ನಂಬಿಕೆಯಿಲ್ಲ. ಆದರೆ, ಸಮಾಜ ಸಮಾಜವನ್ನು ಒಡೆಯುವ ಮೂಲಕ ಕೇವಲ ಹಿಂದೂಗಳ ಮತ ಬ್ಯಾಂಕ್ ಮೇಲೆ ಮಾತ್ರ ಆಸೆ ಹೊಂದಿದೆ. ಆದ್ದರಿಂದ ಕಾಂಗ್ರೆಸ್​ನ‌ ಈ ನೀಚ ಕೃತ್ಯಕ್ಕೆ ಹಿಂದೂ ಸಮಾಜ ಸರಿಯಾದ ಪಾಠ ಕಲಿಸಲಿದೆ ಎಂದು ಹೇಳಿದರು. 

ದೇವಾಲಯಗಳ ಸ್ವಾಯತ್ತತೆ ಯೋಜನೆಯನ್ನು ಸ್ವಾಗತಿಸುತ್ತೇನೆ. ಹಿಂದೂ ಸಮಾಜವೂ ಸೇರಿದಂತೆ ಎಲ್ಲ ದೇವಸ್ಥಾನಗಳು, ಮಠಾಧಿಪತಿಗಳು‌ ಇದನ್ನು ಸ್ವಾಗತಿಸಿದ್ದಾರೆ. ಇದೇ ರೀತಿಯಲ್ಲಿ ಮತಾಂತರ ನಿಷೇಧ ಕಾನೂನು ಕೂಡಾ ಯಾವುದೇ ಮತಧರ್ಮಗಳನ್ನು ವಿರೋಧಿಸುವಂತೆ ಮಾಡಿರುವ ಕಾಯ್ದೆಯಲ್ಲ. ಮತಾಂತರ ಕೇವಲ ಹಿಂದೂಗಳಲ್ಲಿ ಮಾತ್ರವಲ್ಲ, ಎಲ್ಲ ಸಮುದಾಯಗಳಲ್ಲೂ ಮತಾಂತರ ಕೃತ್ಯ ನಡೆಯುತ್ತಿದೆ. ಈ ಕುರಿತಾದ ನಿರ್ಧಾರ ಕೈಗೊಳ್ಳಲು ನಮ್ಮ ಸರ್ಕಾರ‌ ಬದ್ಧವಿದೆ ಎಂದರು. 

ಸಿದ್ದರಾಮಯ್ಯ ಈ ಕುರಿತು ಬಹಳಷ್ಟು ಟೀಕೆಗಳನ್ನು ಮಾಡುತ್ತಿದ್ದು, ಅವರು ಯಾರನ್ನು ಮೆಚ್ಚಿಸಲೆಂದು ಟಿಪ್ಪು ಜಯಂತಿ ಮಾಡಿದರು ಎಂಬುದನ್ನು ಮೊದಲು ಯೋಚನೆ ಮಾಡಲಿ. ಟಿಪ್ಪು ಜಯಂತಿ ಮಾಡುವ ಮೂಲಕ ಸಮಾಜವನ್ನು ಒಡೆದು ಆಳುವ ಕೆಲಸ ಮಾಡಿದರು. ಶಾದಿ ಭಾಗ್ಯದಲ್ಲೂ ಅವರು ಅಲ್ಪಸಂಖ್ಯಾತರನ್ನು ಹುಡುಕಿದ್ದರು. ಯೋಜನೆಗಳಲ್ಲಿ ಮತೀಯ ಭಾವನೆಗಳನ್ನು ಹುಡುಕುವ ಅವರು ಇದೀಗ ಮತಾಂತರ ನಿಷೇಧ ಕಾನೂನು, ದೇವಾಲಯಗಳ ಸ್ವಾಯತ್ತತೆಯನ್ನು ವಿರೋಧಿಸಿ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ.

ಈಗ ಅಹಿಂದ ಹೇಳುತ್ತಿರುವ ಸಿದ್ದರಾಮಯ್ಯ, ತಮ್ಮ ಕಾಲದಲ್ಲಿ ಹಿಂದುಳಿದ ವರ್ಗಗಳ ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ, ಪುಟ್ಟಪ್ಪ ಸತ್ತಾಗ ಏನು ಮಾಡಿದ್ದಾರೆ. ಅವರು ಹಿಂದೂ ಸಮಾಜವನ್ನು ಒಡೆದು ಆಳುತ್ತಾ ಅಹಿಂದವನ್ನು ಸೃಷ್ಟಿ ಮಾಡಿ ಮತ ಬ್ಯಾಂಕ್​ಗೋಸ್ಕರ ಆಸೆ ಪಡುತ್ತಿದ್ದಾರೆ ಎಂದರು.

ಮೇಕೆದಾಟು ಪಾದಯಾತ್ರೆ ಎಂಬುದು ಕಾಂಗ್ರೆಸ್​ನ ಹೀನ ರಾಜಕಾರಣ. ಕೋವಿಡ್ ಒಂದನೇ, ಎರಡನೇ ಅಲೆ ಬಂದಾಗ ಕಾಂಗ್ರೆಸ್ ಟೀಕೆ ಮಾಡಿದ್ದನ್ನು ಬಿಟ್ಟರೆ ಬೇರೆ ಯಾವ ಕೆಲಸವನ್ನು ಮಾಡಿಲ್ಲ. ಈ ಸಂದರ್ಭ ಅವರು ಜನರನ್ನು ದಾರಿತಪ್ಪಿಸುವ ಕೆಲಸ ಮಾಡಿದ್ದರು. ಕಾಂಗ್ರೆಸ್ ಜನರನ್ನು ಕೊಲ್ಲುವ ಕಾರ್ಯ ಮಾಡುತ್ತಿದೆ. ಈ ಹಿಂದೆ ಕೂಡಾ ಕಾಂಗ್ರೆಸ್ ಸರ್ಕಾರ ಇತ್ತು. ಆಗ ಯಾಕೆ ಮೇಕೆದಾಟು ಬಗ್ಗೆ ಚರ್ಚೆ ಮಾಡಿಲ್ಲ. ಬಿಜೆಪಿ ಸರ್ಕಾರ ಈ ಬಗ್ಗೆ ಸಂಪೂರ್ಣ ಬದ್ಧತೆ ಹೊಂದಿದ್ದು, ಈಗಾಗಲೇ ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಮೇಕೆದಾಟು ಯೋಜನೆಯನ್ನ ನಾವು ಮಾಡಿಯೇ ಮಾಡುತ್ತೇವೆ. ಅದಕ್ಕೆ ಕಾಂಗ್ರೆಸ್ ನವರ ಪಾದಯಾತ್ರೆ ಅಗತ್ಯವಿಲ್ಲ. ರಾಜಕೀಯ ಲಾಭಕ್ಕೋಸ್ಕರ ಕಾಂಗ್ರೆಸ್ ನಾಟಕ ಮಾಡುತ್ತಿದ್ದಾರೆ. ಜೊತೆಗೆ ಮೇಕೆದಾಟು ಪಾದಯಾತ್ರೆಯ ಮೂಲಕ ಕೊರೊನಾವನ್ನು ಹೆಚ್ಚಳ ಮಾಡಲು ಹೋಗುತ್ತಿದ್ದಾರೆ ಎಂದು ಹೇಳಿದರು.

Ads on article

Advertise in articles 1

advertising articles 2

Advertise under the article