ಯುವಕನಿಗಿಂತ ಯುವತಿಯೇ ದೊಡ್ಡವಳೆಂದು ಪ್ರೇಮಿಗಳ ವಿವಾಹಕ್ಕೆ ದೊರಕಿಲ್ಲ ಪಾಲಕರ ಅನುಮತಿ: ಮುಂದೆ ನಡೆದದ್ದೇ ದುರಂತ

ಮೇದಕ್​: ಪಾಲಕರಿಂದ ಮದುವೆಗೆ ಒಪ್ಪಿಗೆ ದೊರಕದಿರುವುದಕ್ಕೆ ಮನನೊಂದ ಪ್ರೇಮಿಗಳಿಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಮೇದಕ್​ ಜಿಲ್ಲೆಯಲ್ಲಿ ನಡೆದಿದೆ. 

ತೆಲಂಗಾಣ ರಾಜ್ಯದ ನಗಿಲಿಗಿಡ್ಡ ವಲಯದ ಮೈನೆಲ್ಲಿ ಗ್ರಾಮದ ಅನಿಲ್​ (25) ಮತ್ತು ಸಂಗಾರೆಡ್ಡಿ ಜಿಲ್ಲೆಯ ಭಗತ್​ಸಿಂಗ್​ ಕಾಲನಿಯ ಕೃಷ್ಣವೇಣಿ (28) ಮೃತಪಟ್ಟವರು.

ಜನವರಿ 5ರಂದು ಈ ಪ್ರೇಮಿಗಳು ನಾಪತ್ತೆಯಾಗಿದ್ದರು. ಸಾಕಷ್ಟು ಹುಡುಕಾಟದ ಬಳಿಕ ಇಬ್ಬರ ಶವ ಮಂಜಿರಾ ನದಿಯಲ್ಲಿ ಪತ್ತೆಯಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಯ ಬಲೆಗೆ ಬಿದ್ದಿದ್ದರು. ಬಳಿಕ ತಮ್ಮ ಮದುವೆಯ ಪ್ರಸ್ತಾಪವನ್ನು ತಮ್ಮ ಮನೆಯವರ ಮುಂದೆ ಇರಿಸಿಸಿದ್ದರು. ಆದರೆ, ಇಬ್ಬರ ಜಾತಿಯೂ ಬೇರೆ ಬೇರೆಯಲ್ಲದೇ, ವಯಸ್ಸಿನಲ್ಲಿ ಯುವಕನಿಗಿಂತ ಯುವತಿಯೇ ದೊಡ್ಡವಳಾಗಿದ್ದರಿಂದ ಪಾಲಕರು ಮದುವೆಗೆ ಸಮ್ಮತಿಸಿರಲಿಲ್ಲ.

ಇದರಿಂದ ತೀವ್ರವಾಗಿ ಮನನೊಂದಿದ್ದ ಪ್ರೇಮಿಗಳಿಬ್ಬರು ಜ.5ರಂದು ಮನೆ ಬಿಟ್ಟು ಹೋಗಿದ್ದರು. ಸಾಕಷ್ಟು ಹುಡುಕಾಟದ ಬಳಿಕವೂ ಇಬ್ಬರೂ ಪತ್ತೆಯಾಗದಿದ್ದಾಗ ಸಂಗಾರೆಡ್ಡಿ ಪೊಲೀಸರಿಗೆ ಎರಡು ಕುಟುಂಬಗಳು ದೂರು ನೀಡಿತ್ತು.

ರಾಯ್ಕೋಡ್​ ವಲಯದ ಸಿರುರು ಗ್ರಾಮದ ಬಳಿಯಿರುವ ಮಂಜಿರಾ ನದಿ ಸೇತುವೆಯ ಮೇಲೆ ಬೈಕೊಂದು ಸಾಕಷ್ಟು ಹೊತ್ತಿನಿಂದ ನಿಂತಿರುವುದನ್ನು ನೋಡಿ ಸ್ಥಳೀಯರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೈಕ್​ ಸಂಖ್ಯೆಯ​ ಆಧಾರದ ಮೇಲೆ ಮಾಹಿತಿ ಪತ್ತೆಹಚ್ಚಿದಾಗ ನಾಪತ್ತೆಯಾಗಿದ್ದ ಅನಿಲ್​ ಬೈಕ್ ಇದೆಂಬುದು ಪೊಲೀಸರಿಗೆ ತಿಳಿದಿದೆ. ಒಂದು ಮೃತದೇಹ ಶುಕ್ರವಾರ ಪತ್ತೆಯಾಗಿದ್ದು, ಅದು ಕೃಷ್ಣವೇಣಿಯದ್ದು ಎಂದು ಪಾಲಕರು ಪತ್ತೆಹಚ್ಚಿದ್ದಾರೆ. 

ಮತ್ತೊಂದು ಮೃತದೇಹ ಶನಿವಾರ ಪತ್ತೆಯಾಗಿದ್ದು, ಅದು ಅನಿಲ್​ ಎಂದು ಪಾಲಕರು ಗುರುತಿಸಿದ್ದಾರೆ. ಎರಡೂ ಮೃತದೇಹಗಳನ್ನು ಸಂಗಾರೆಡ್ಡಿ ಸರ್ಕಾರಿ ಆಸ್ಪತ್ರೆಯಲ್ಲಿ ಮಹಜರು ನಡೆಸಿ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.