ಪಡುಬಿದ್ರೆ ಪೇಟೆಯಲ್ಲಿ ವಿದ್ಯಾರ್ಥಿಗಳ ದಾಂಧಲೆ ಪ್ರಕರಣ: ಇಬ್ಬರು ಯುವಕರ ಡ್ರಗ್ಸ್ ಸೇವನೆ ದೃಢ!

ಪಡುಬಿದ್ರೆ: ಇಲ್ಲಿನ ಪೇಟೆಯಲ್ಲಿ ಕಳೆದ ವಾರ ಓರ್ವ ಯುವತಿ ಸೇರಿ ಮತ್ತೀರ್ವರು ವಿದ್ಯಾರ್ಥಿಗಳು ದಾಂಧಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳು ಡ್ರಗ್ಸ್ ಸೇವಿಸಿದ್ದು ವರದಿಯಲ್ಲಿ ಖಾತರಿಯಾಗಿದೆ. 

ಚೆನ್ನೈ ಮೂಲದ ವಿದ್ಯಾರ್ಥಿಗಳಾದ ಇವರು ಮಣಿಪಾಲದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇಬ್ಬರು ಯುವಕರು ಹಾಗೂ ಓರ್ವ ಯುವತಿ ಪಡುಬಿದ್ರೆ ಪೇಟೆಯಲ್ಲಿ ಅಮಲು ಪದಾರ್ಥ ಸೇವಿಸಿ, ಗಲಾಟೆ ಮಾಡಿ ಬೀದಿ ರಂಪ ಮಾಡಿದ್ದರು. ಕೊನೆಗೆ ಪಡುಬಿದ್ರೆ ಪೊಲೀಸರು ಹರಸಾಹಸಪಟ್ಟು ಮೂವರನ್ನೂ ಆಸ್ಪತ್ರೆಗೆ ಕರೆದೊಯ್ದು, ಡಗ್ಸ್ ಸೇವನೆ ಪರೀಕ್ಷೆ ನಡೆಸಿದ್ದಾರೆ.

ಸದ್ಯ ವರದಿ ಪೊಲೀಸರ ಕೈ ಸೇರಿದ್ದು, ವರದಿಯಲ್ಲಿ ಇಬ್ಬರು ಯುವಕರು ಡಗ್ಸ್ ಸೇವನೆ ಮಾಡಿರುವುದು ಖಾತರಿಯಾಗಿದೆ. ವಿದ್ಯಾರ್ಥಿನಿ ವರದಿ ನೆಗೆಟಿವ್ ಬಂದಿದ್ದು, ವರದಿಯ ಆಧಾರದಲ್ಲಿ ಇಬ್ಬರು ಯುವಕರ ಮೇಲೆ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.