ಡ್ಯಾನ್ಸ್ ಮಾಡುತ್ತ ವಿವಾಹ ಮಂಟಪಕ್ಕೆ ಬಂದ ವಧುವಿನ ಮೇಲೆ ಗರಂ ಆದ ವರ: ಬೇರೊಬ್ಬನಿಂದ ತಾಳಿ ಕಟ್ಟಿಸಿಯೇ ಬಿಟ್ಟಳು ಮದುಮಗಳು!


ಚೆನ್ನೈ: ಇತ್ತೀಚಿಗೆ ವಿವಾಹ ಮಂಟಪಕ್ಕೆ ಬರುವ ವೇಳೆ ವಧು  ಡಾನ್ಸ್ ಮಾಡುತ್ತಾ ಬರೋದು ಫ್ಯಾಶನ್ ಆಗಿದೆ. ಇದೇ ರೀತಿ ಇಲ್ಲೊಬ್ಬ ವಧುವು ಮಂಟಪಕ್ಕೆ ಡ್ಯಾನ್ಸ್ ಮಾಡುತ್ತಾ ಬಂದಿದ್ದಾಳೆನ್ನುವ ಕಾರಣಕ್ಕೆ ವರ ಆಕೆಯ ಕೆನ್ನೆಗೆ ಹೊಡೆದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಆಕೆಯೂ ಅವನ ಕೆನ್ನೆಗೆ ಬಾರಿಸಿದ್ದಾಳೆ. ಪರಿಣಾಮ ಮದುವೆಯನ್ನೇ ಕ್ಯಾನ್ಸಲ್‌ ಮಾಡಿರುವ ಘಟನೆ ತಮಿಳುನಾಡಿನ ಪನ್ರುತಿಯಲ್ಲಿ ನಡೆದಿದೆ.

ತಮಿಳುನಾಡಿನ ಉದ್ಯಮಿ, ಸ್ನಾತಕೋತ್ತರ ಪದವೀಧರೆಗೆ ಚೆನ್ನೈನಲ್ಲಿ ಇಂಜಿನಿಯರ್​ ಆಗಿರುವ ವರನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ಪನ್ರುತಿಯಲ್ಲಿನ ಖಾಸಗಿ ಛತ್ರವೊಂದರಲ್ಲಿ ಮದುವೆ ಆಯೋಜಿಸಲಾಗಿತ್ತು. ಜನವರಿ 20ರಂದು ಮದುವೆಯಿದ್ದು, ಜ.19ರಂದು ರಾತ್ರಿ ಅದೇ ಮಂಟಪದಲ್ಲಿ ನಿಶ್ಚಿತಾರ್ಥವಿತ್ತು.

ಈ ಸಂದರ್ಭ ವಧು ನಿಶ್ಚಿತಾರ್ಥ ಮಾಡಿಕೊಳ್ಳಲು ಮಂಟಪಕ್ಕೆ ಬರುವಾಗ ಡ್ಯಾನ್ಸ್‌ ಮಾಡುತ್ತಾ ಬಂದಿದ್ದಾಳೆ. ಇದು ವರನ ಕೋಪಕ್ಕೆ ಗುರಿಯಾಗಿದೆ. ವಧು ಮಂಟಪಕ್ಕೆ ಬರುತ್ತಿದ್ದಂತೆಯೇ ಸಿಟ್ಟಿಗೆದ್ದ ವರ ಆಕೆಗೆ ಕಪಾಳಮೋಕ್ಷ ಮಾಡಿದ್ದಾನೆ. ಇಷ್ಟು ಆಗುತ್ತಿದ್ದಂತೆಯೇ ವಧೂ ಸುಮ್ಮನಾಗದೆ ವಾಪಸ್‌ ಅವಳೂ ತಿರುಗಿ ಅವನ ಕೆನ್ನೆಗೆ ಬಾರಿಸಿದ್ದಾಳೆ. 

ತನ್ನ ಮಗಳಿಗಾಗಿರುವ ಅವಮಾನವನ್ನು ಸಹಿಸದ ವಧುವಿನ ತಂದೆ, ವರನ ಕುಟುಂಬಸ್ಥರೊಂದಿಗೆ ಜಗಳ ತೆಗೆದು, ಮದುವೆಯನ್ನೇ ಕ್ಯಾನ್ಸಲ್‌ ಮಾಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ವರನ ಕುಟುಂಬದವರು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಕೊನೆಗೆ ಮದುವೆ ಮುರಿದುಹೋಗಿದೆ. 

ಆದರೆ ಇಷ್ಟಕ್ಕೆ ಸುಮ್ಮನಾಗದ ವಧುವಿನ ಅಪ್ಪ ವಿಲ್ಲುಪುರಮ್​ನ ಸಂಬಂಧದ ಹುಡುಗನೊಂದಿಗೆ ಅದೇ ದಿನ ಅದೇ ಮಂಟಪದಲ್ಲಿ ಮಗಳ ಮದುವೆಯನ್ನು ಮಾಡಿಸಿದ್ದಾರೆ. ಇದರಿಂದ ಅವಮಾನಗೊಂಡ ವರ ಪನ್ರುತಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ನಿಶ್ಚಿತಾರ್ಥಕ್ಕೆ ಖರ್ಚು ಮಾಡಿರುವ 7 ಲಕ್ಷ ರೂ.ಗಳನ್ನು ವಾಪಸ್​ ನೀಡುವಂತೆ ಕೇಳಿದ್ದಾನೆ. ಸದ್ಯ ಈ ವಿವಾದ ಠಾಣೆಯಲ್ಲಿದ್ದು, ಪೊಲೀಸರು ಎರಡೂ ಮನೆಯವರೊಂದಿಗೆ ಮಾತನಾಡಿ ತನಿಖೆ ಮಾಡುತ್ತಿದ್ದಾರೆ.