-->
ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಯತ್ನಕ್ಕೆ ನಟಿ ಭಾಮಾ ನೀಡಿರುವ ಸ್ಪಷ್ಟನೆ ಏನು?

ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಯತ್ನಕ್ಕೆ ನಟಿ ಭಾಮಾ ನೀಡಿರುವ ಸ್ಪಷ್ಟನೆ ಏನು?

ಕೊಚ್ಚಿ: ಹೆಚ್ಚಿನ ನಿದ್ರೆ ಮಾತ್ರೆಗಳನ್ನು ಸೇವನೆ ಮಾಡಿ ಆತ್ಮಹತ್ಯೆ ಯತ್ನಿಸಿರುವ ನಟಿ ಭಾಮಾ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸುದ್ದಿಯೊಂದು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 2017ರಲ್ಲಿ ಖ್ಯಾತ ನಟಿಯೋರ್ವರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹೊಸ ಬೆಳವಣಿಗೆಗಳು ನಡೆಯುತ್ತಿದೆ. ಇದಕ್ಕೆ ಹೆದರಿ ಭಾಮಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದಾರೆ. 

ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಟಿ ಭಾಮಾ ಕೂಡ ಪ್ರಮುಖ ಸಾಕ್ಷ್ಯಾಧಾರರಲ್ಲಿ ಒಬ್ಬರು. ಆದರೆ, ವಿಚಾರಣೆಯ ವೇಳೆ ಭಾಮಾ ಉಲ್ಟಾ ಹೊಡೆದಿದ್ದಾರೆ ಎಂಬ ಆರೋಪ ಹೊತ್ತಿದ್ದಾರೆ. ಅಲ್ಲದೆ, ತನಿಖಾ ತಂಡವು ಇತ್ತೀಚೆಗೆ ಈ ಪ್ರಕರಣದಲ್ಲಿ ಉಲ್ಟಾ ಹೊಡೆದವರ ಹಣಕಾಸು ವ್ಯವಹಾರವನ್ನು ಪರಿಶೀಲಿಸಿದ್ದು, ಹಲವು ಮಹತ್ವದ ಸುಳಿವುಗಳು ದೊರೆತಿವೆ ಎಂದು ಹೇಳಲಾಗುತ್ತಿದೆ. 

ಪ್ರಮುಖ ಆರೋಪಿ ದಿಲೀಪ್​ ಅವರ ಆಪ್ತ ಹಾಗೂ ನಿರ್ದೇಶಕರಾಗಿರುವ ಬಾಲಚಂದ್ರ ಕುಮಾರ್​ ನೀಡಿರುವ ಸ್ಪೋಟಕ ಹೇಳಿಕೆಯನ್ವಯ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹೊಸ ಬೆಳವಣಿಗೆ ನಡೆಯುತ್ತಿದೆ. ತಮ್ಮ ಮೇಲಿನ ಆತ್ಮಹತ್ಯೆ ಯತ್ನ ಸುದ್ದಿ ಹರಿದಾಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ನಟಿ ಭಾಮಾ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. 


'ಎಲ್ಲೆಡೆ ಹರಿದಾಡುತ್ತಿರುವ ಸುದ್ದಿ ಕೇವಲ ವದಂತಿಯಷ್ಟೆ. ನಾನು ಹಾಗೂ ನನ್ನ ಕುಟುಂಬ ಆರೋಗ್ಯಯುತವಾಗಿದ್ದೇವೆ. ನನ್ನ ವಿರುದ್ಧ ಇತ್ತೀಚೆಗೆ ಹಲವು ಆರೋಪಗಳು ಮತ್ತು ವದಂತಿಗಳು ಹರಿದಾಡುತ್ತಿವೆ. ಆದರೆ ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ಕಾಳಜಿ ಹೊಂದಿರುವವರಿಗೆ, ನಾವು ಉತ್ತಮ ಆರೋಗ್ಯ ಮತ್ತು ಉತ್ಸಾಹದಲ್ಲಿದ್ದೇವೆ ಎಂಬುದನ್ನು ತಿಳಿಯಲು ಇಚ್ಛಿಸುತ್ತೇನೆ. ನಿಮ್ಮ ಪ್ರೀತಿಗೆ ಧನ್ಯವಾದಗಳು' ಎಂದು ಭಾಮಾ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 

ನಟಿ ಭಾಮಾ ಪ್ರಖ್ಯಾತ ಮಲಯಾಳಂ ನಟಿ. ಕೇವಲ ಮಲಯಾಳಂ ಮಾತ್ರವಲ್ಲದೆ, ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಸಿನಿರಸಿಕರ ಮನದಲ್ಲೂ ಭಾಮಾ ಗಟ್ಟಿಯಾಗಿ ನೆಲೆಸಿದ್ದಾರೆ. 2020ರಲ್ಲಿ ಅವರು ಅರುಣ್​ ಎಂಬ ಉದ್ಯಮಿಯನ್ನು ಮದುವೆಯಾಗಿದ್ದಾರೆ. ಆ ಬಳಿಕ ಸಿನಿಮಾ ಕ್ಷೇತ್ರದಿಂದ ಅಂತರ ಕಾಯ್ದುಕೊಂಡಿದ್ದಾರೆ. ಕಳೆದ ವರ್ಷ ಭಾಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇತ್ತೀಚೆಗಷ್ಟೇ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದರು. ಸಿನಿಮಾ ವಿಚಾರಕ್ಕೆ ಬಂದರೆ, ಭಾಮಾ ಅವರು ಕೊನೆಯದಾಗಿ 2018 ರಲ್ಲಿ ಬಿಡುಗಡೆಯಾದ ಮಲಯಾಳಂ ಚಲನಚಿತ್ರ ‘ಖಿಲಾಫತ್’ ನಲ್ಲಿ ಕಾಣಿಸಿಕೊಂಡಿದ್ದರು.

Ads on article

Advertise in articles 1

advertising articles 2

Advertise under the article