'ಅವನು' ಎಲ್ಲೆಲ್ಲೂ ಮುತ್ತಿಟ್ಟ ಖಾಸಗಿ ಫೋಟೋಗಳನ್ನು ದಯವಿಟ್ಟು ಪ್ರಸಾರ ಮಾಡಬೇಡಿ ಎಂದ 'ನಟಿ'!

ಮುಂಬೈ: ಬಹುಕೋಟಿ ರೂ. ವಂಚನೆ ಆರೋಪ ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್‌ನಿಂದ ಲಕ್ಷ ಲಕ್ಷ ರೂ. ಬೆಲೆ ಬಾಳುವ ಅರೇಬಿಯನ್ ಕುದುರೆ, ವಜ್ರದ ಕಿವಿಯೋಲೆಗಳು, ಐಷಾರಾಮಿ ಕಾರುಗಳು, ಒಂದು ಜೋಡಿ ಲೂಯಿ ವಿಟಾನ್ ಶೂಸ್‌ ಸೇರಿದಂತೆ ಕೋಟಿಗಟ್ಟಲೆ ಹಣದ ಉಡುಗೊರೆ ಪಡೆದು ತನ್ನದೆಲ್ಲಾ ಅರ್ಪಿಸಿಕೊಂಡಿರುವ ಶ್ರೀಲಂಕಾ ಮೂಲದ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಈಗ ಭಾರೀ ಪೇಚಿಗೆ ಸಿಲುಕಿದ್ದಾರೆ.

ಬಹುಕೋಟಿ ರೂ. ಹಗರಣದಲ್ಲಿ ಸುಕೇಶ್‌ ಚಂದ್ರಶೇಖರ್‌ ಬಂಧನವಾಗುತ್ತಿದ್ದಂತೆಯೇ ಆತ ಯಾರೊಂದಿಗೆಲ್ಲಾ ಸಂಪರ್ಕದಲ್ಲಿದ್ದ ಎಂಬುದರ ಲಿಸ್ಟ್ ಮಾಡಿದಾಗ ಪೊಲೀಸರೇ ಶಾಕ್‌ ಆಗಿದ್ದಾರೆ. ಈತ ಹಲವಾರು ಖ್ಯಾತ ನಟಿಯರು ಸೇರಿದಂತೆ ಸೆಲೆಬ್ರಿಟಿಗಳಿಗೆ ನೀರಿನಂತೆ ಹಣವನ್ನು ಖರ್ಚು‌ ಮಾಡಿ ಅವರನ್ನೆಲ್ಲಾ ತನ್ನವರನ್ನಾಗಿ ಮಾಡಿಕೊಂಡಿದ್ದ. ಆ ಪಟ್ಟಿಯಲ್ಲಿ ಶ್ರೀಲಂಕಾ ಮೂಲದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಟಾಪ್‌ 1 ಸ್ಥಾನದಲ್ಲಿದ್ದಾರೆ.

ಈಕೆ ಸುಕೇಶ್‌ನೊಂದಿಗಿದ್ದ ಫೋಟೋಗಳು ಭಾರಿ ವೈರಲ್‌ ಆಗುತ್ತಿದೆ. ಇದರಲ್ಲಿ ಜಾಕ್ವಲಿನ್‌ಗೆ ಸುಕೇಶ್‌ ಕಿಸ್‌ ಕೊಟ್ಟಿರುವ ದೃಶ್ಯ ಸೇರಿದಂತೆ ಖಾಸಗಿಯಾಗಿ ಜೊತೆಗಿದ್ದ ಹಲವಾರು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದರಿಂದ ಭಾರೀ ಬೇಸರಗೊಂಡಿರುವ ನಟಿ ಜಾಕ್ವಲಿನ್, 'ತನ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಬೇಡಿ. ಭಾರತ ದೇಶ ಹಾಗೂ ಇಲ್ಲಿನ ಜನತೆ ನನಗೆ ಯಾವಾಗಲೂ ಅಪಾರ ಪ್ರೀತಿ ಮತ್ತು ಗೌರವವನ್ನು ನೀಡಿದ್ದಾರೆ. ಇದರಲ್ಲಿ ಮಾಧ್ಯಮಗಳ ಸ್ನೇಹಿತರೂ ಇದ್ದಾರೆ. ಇವರುಗಳಿಂದ ನಾನು ಬಹಳಷ್ಟು ಕಲಿತಿದ್ದೇನೆ. ನಾನೀಗ ಸಮಸ್ಯೆಯಲ್ಲಿ ಸಿಲುಕಿದ್ದೇನೆ ಎಂಬುದು ಎಲ್ಲರಿಗೂ ಗೊತ್ತು. ನನ್ನ ಖಾಸಗಿತನ ಹಾಗೂ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಇರುವ ಫೋಟೋಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಬೇಡಿ ಎಂದು ಕೇಳಿಕೊಳ್ಳುತ್ತಿದ್ದೇನೆ. ನ್ಯಾಯ ಮತ್ತು ಒಳ್ಳೆಯತನ ಯಾವಾಗಲೂ ಮೇಲುಗೈ ಸಾಧಿಸುತ್ತವೆ ಎಂದು ಆಶಿಸುತ್ತೇವೆ. ಧನ್ಯವಾದ' ಎಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೋರಿಕೊಂಡಿದ್ದಾರೆ.