Puttur: ಆತ್ಮಹತ್ಯೆಗೆ ಯತ್ನಿಸಿದ್ದ ಮುಖ್ಯಶಿಕ್ಷಕಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಪುತ್ತೂರು: ಆತ್ಮಹತ್ಯೆಗೆ ಯತ್ನಿಸಿದ್ದ ನಗರದ ಹಾರಾಡಿ ಶಾಲೆಯ ಮುಖ್ಯ ಶಿಕ್ಷಕಿಯೋರ್ವರು ಚಿಕಿತ್ಸೆ‌ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ.

ಹಾರಾಡಿ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಿಯಾ ಕುಮಾರಿ ಮೃತ ದುರ್ದೈವಿ.

ಪ್ರಿಯಾ ಕುಮಾರಿ ಸೋಮವಾರ ಬೆಳಗ್ಗೆ ವಿಟ್ಲ ಸಮೀಪದ ತಮ್ಮ ಮನೆಯಲ್ಲಿ ನೇಣಿಗೆ ಕುಣಿಕೆಯೊಡ್ಡಿ ಆತ್ಮಹತ್ಯೆಗೆ ಯತ್ನಿಸಿದ್ದರು. ಪರಿಣಾಮ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಪುತ್ತೂರಿನ ಖಾಸಗಿ‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ.

ಪ್ರಿಯಾ ಕುಮಾರಿಯವರು ಕಳೆದ ಗುರುವಾರದವರೆಗೆ ಹಾರಾಡಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ವರ್ಗಾವಣೆ ನಿಮಿತ್ತ ಶುಕ್ರವಾರದಿಂದ ಪಾಪೆಮಜಲು ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. 

ಭಾನುವಾರ ಮನೆಯಲ್ಲಿ ಆರಾಮವಾಗಿಯೇ ಇದ್ದ ಅವರು, ಸೋಮವಾರ ಬೆಳಗ್ಗೆ ಬೇಗನೇ ಎದ್ದಿದ್ದರು. ಅವರ ಪತಿ ಸ್ನಾನ ಮಾಡುತ್ತಿದ್ದ ಸಂದರ್ಭ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಪ್ರಿಯಾ ಪತಿ ನಿವೃತ್ತ ಯೋಧರಾಗಿದ್ದು, ಪ್ರಸ್ತುತ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಮೃತರು ಪತಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪ್ರಿಯಾ ಹನ್ನೊಂದು ವರ್ಷಗಳ ಕಾಲ ಹಾರಾಡಿ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು.
BREAKING NEWS
Loading latest news...
Join our WhatsApp Channel Powered By : Online Pudu