
ಪಿಎಸ್ಐ ಕಾಮಕಾಂಡವನ್ನು ಬಯಲಿಗೆಳೆದ ಹೆಡ್ ಕಾನ್ ಸ್ಟೇಬಲ್: ಪದೇ ಪದೆ ಅಬಾರ್ಷನ್ ಕಿಟ್, ಪ್ರೆಗ್ನೆನ್ಸಿ ಕಿಟ್ ತರಿಸಿಕೊಳ್ಳುತ್ತಿದ್ದ ಆರೋಪ
12/06/2021 12:39:00 AM
ಬೆಂಗಳೂರು: ನೆರೆಮನೆಯವರೊಳಗಿನ ಜಗಳಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಪೊಲೀಸ್ ಠಾಣೆಗೆ ಕರೆತಂದು ದೌರ್ಜನ್ಯ ಎಸಗಿದ್ದಾರೆಂದು ಆರೋಪ ಹೊತ್ತಿರುವ ಬ್ಯಾಟರಾಯನಪುರ ಠಾಣೆಯ ಸಬ್ ಇನ್ಸ್ಪೆಕ್ಟರ್ ಹರೀಶ್ ವಿರುದ್ಧ ಮತ್ತೊಂದು ಸ್ಫೋಟಕ ವಿಚಾರ ವೈರಲ್ ಆಗಿದೆ. ಎಸ್ಐ ಹರೀಶ್ ಅವರು, ಮುಖ್ಯಪೇದೆಯೊಬ್ಬರಲ್ಲಿ, ಪದೇ ಪದೆ ಅಬಾರ್ಷನ್ ಕಿಟ್, ಪ್ರೆಗ್ನೆನ್ಸಿ ಕಿಟ್ ತರಿಸಿಕೊಳ್ಳುತ್ತಿದ್ದರೆಂಬ ವಿಚಾರ ಬಹಿರಂಗಗೊಂಡಿದೆ.
ಇತ್ತೀಚಿಗೆ ನೆರೆಮನೆಯವರೊಂದಿಗಿನ ಜಗಳ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತೌಸೀಫ್ ಪಾಷಾ ಎಂಬಾತನ್ನು ಎಸ್ಐ ಹರೀಶ್ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು. ಆದರೆ ಅವರು ಎಫ್ಐಆರ್ ದಾಖಲಿಸದೆ ಆತನಿಗೆ ಮನಸೋ ಇಚ್ಛೆ ಥಳಿಸಿದ್ದರು. ಕುಡಿಯಲು ನೀರು ಕೇಳಿದರೆ ಬಾಟಲ್ಗೆ ಮೂತ್ರ ತುಂಬಿಸಿ ನೀಡಿದ್ದರು. ಆತನ ಗಡ್ಡ ಬೋಳಿಸಿ ಅಮಾನವೀಯವಾಗಿ ವರ್ತಿಸಿದ್ದಾರೆಂದು ಮಾನವ ಹಕ್ಕುಗಳ ಕಾರ್ಯಕರ್ತರೊಬ್ಬರು ಟ್ವಿಟರ್ನಲ್ಲಿ ಪಶ್ಚಿಮ ವಿಭಾಗದ ಡಿಸಿಪಿಗೆ ದೂರು ನೀಡಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಡಿಸಿಪಿ ಸಂಜೀವ ಪಾಟೀಲ್, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಕೆಂಗೇರಿ ಉಪ ವಿಭಾಗದ ಎಸಿಪಿ ಕೋದಂಡರಾಮಯ್ಯನವರಿಗೆ ಸೂಚನೆ ನೀಡಿದ್ದಾರೆ. ತೌಸೀಫ್ ಹಾಗೂ ಎಸ್ಐ ಹರೀಶ್ ಅವರನ್ನು ವಿಚಾರಣೆ ನಡೆಸಿರುವ ಎಸಿಪಿ, ತನಿಖೆ ಮುಕ್ತಾಯಗೊಳಿಸಿದ್ದು, ಇಂದು ಡಿಸಿಪಿಗೆ ವರದಿ ಸಲ್ಲಿಸುವ ಸಾಧ್ಯತೆಯಿದೆ.
ಇದರ ಬೆನ್ನಲ್ಲೇ ಪಿಎಸ್ಐ ಹರೀಶ್ ಅವರು ಹೆಡ್ ಕಾನ್ ಸ್ಟೇಬಲ್ ಬಳಿ ಅಬಾರ್ಷನ್ ಕಿಟ್, ಪ್ರೆಗ್ನೆನ್ಸಿ ಕಿಟ್ ತರಿಸಿಕೊಳ್ಳುತ್ತಿದ್ದರು ಎಂಬ ಆಡಿಯೋವೊಂದು ವೈರಲ್ ಆಗಿದೆ. ಬ್ಯಾಟರಾಯನಪುರ ಹೊಯ್ಸಳ ಬೀಟ್ನಲ್ಲಿದ್ದ ಮುಖ್ಯಪೇದೆ ಮಂಜು ಎಂಬವರು ಕರ್ತವ್ಯದ ವೇಳೆ ಮದ್ಯ ಸೇವನೆ ಮಾಡಿದ್ದರು ಎಂಬ ಕಾರಣಕ್ಕೆ ಹಿರಿಯ ಅಧಿಕಾರಿಗಳಿಗೆ ತಿಳಿಸಿ ಅವರನ್ನು ಪಿಎಸ್ಐ ಹರೀಶ್ ಸಸ್ಪೆಂಡ್ ಮಾಡಿಸಿದ್ದರು. ಸಸ್ಪೆಂಡ್ ರಿವೋಕ್ ಆಗದೆ ನೊಂದಿದ್ದ ಮಂಜು, ಮತ್ತಷ್ಟು ಕುಡಿತ ಚಟ ಅಂಟಿಸಿಕೊಂಡಿದ್ದರು. ಅವರು ಮತ್ತಷ್ಟು ಖಿನ್ನತೆಗೆ ಜಾರಿದ್ದಾರೆ ಎಂದು ಮೂಲಗಳು ತಿಳಿಸಿವೆ.