-->
ಒಂಬತ್ತು ಮಕ್ಕಳಿದ್ದರೂ ಒಂಟಿಯಾದ ವೃದ್ಧ ಮಹಿಳೆಯಿಂದ ಹಿರಿಯ ನಾಗರಿಕರ ಸಹಾಯವಾಣಿಯ ಮೊರೆ

ಒಂಬತ್ತು ಮಕ್ಕಳಿದ್ದರೂ ಒಂಟಿಯಾದ ವೃದ್ಧ ಮಹಿಳೆಯಿಂದ ಹಿರಿಯ ನಾಗರಿಕರ ಸಹಾಯವಾಣಿಯ ಮೊರೆ

ಮಂಗಳೂರು: ಈ ವೃದ್ಧ ಮಹಿಳೆ ಹೆತ್ತದ್ದು ಬರೋಬ್ಬರಿ ಹತ್ತು ಮಕ್ಕಳು. ಓರ್ವ ಮೃತಪಟ್ಟು ಇದೀಗ ಒಂಬತ್ತು ಮಕ್ಕಳಿದ್ದರೂ, ಈಕೆಯೀಗ ಒಬ್ಬಂಟಿ. ಎಲ್ಲಾ ಮಕ್ಕಳು ಈಕೆಯನ್ನು ತೊರೆದಿದ್ದು, ತನ್ನ ಮಕ್ಕಳೊಂದಿಗೆ ಉಳಿದುಕೊಳ್ಳಲು ಅವಕಾಶ ಮಾಡಿ ಕೊಡುವಂತೆ ಈ ವೃದ್ಧ ಮಹಿಳೆಯು ಪಾಂಡೇಶ್ವರ ಪೊಲೀಸ್ ಠಾಣಾ ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡಿದ್ದಾರೆ.
ಸುಬ್ಬಲಕ್ಷ್ಮಿ ಎಂಬ 85 ವರ್ಷದ ವೃದ್ಧೆ ಮಹಿಳೆಯೇ ಈ ರೀತಿ ಸಹಾಯವಾಣಿ ಮೊರೆಹೊಕ್ಕವರು. ಈಕೆ ಹೆತ್ತದ್ದು ಬರೋಬ್ಬರಿ ಹತ್ತು ಮಕ್ಕಳು. ಇವರಲ್ಲಿ ಐವರು ಪುತ್ರಿಯರು, ಐವರು ಪುತ್ರರು. ಪುತ್ರರಲ್ಲೋರ್ವ ಮೃತಪಟ್ಟು, ಇದೀಗ ಒಂಬತ್ತು ಮಕ್ಕಳಿದ್ದಾರೆ. ಆದರೆ ಆಕೆಯ ಬದುಕಿನ ಸಂಧ್ಯಾ ಕಾಲದಲ್ಲಿ ಯಾರೊಬ್ಬ ಮಕ್ಕಳೂ ಈಕೆಯನ್ನು ತಮ್ಮ ಮನೆಯಲ್ಲಿ ಇರಿಸಿಕೊಳ್ಳಲು ತಯಾರಿಲ್ಲ, ಆದರೆ ಸುಬ್ಬಲಕ್ಷ್ಮಿಯವರಿಗೆ ತಿಂಗಳಿಗೊಬ್ಬ ಗಂಡು ಮಕ್ಕಳ ಮನೆಯಲ್ಲಿ ಉಳಿಯಬೇಕೆಂಬ ಬಯಕೆಯಿದ್ದರೂ ಯಾವೊಬ್ಬ ಮಗನೂ ಅದನ್ನು ಈಡೇರಿಸುತ್ತಿಲ್ಲ.‌ ತೊಕ್ಕೊಟ್ಟು ಕಾಪಿಕಾಡು ನಿವಾಸಿಯಾಗಿರುವ ಪುತ್ರನೋರ್ವನ ಮನೆಯಲ್ಲಿದ್ದ ಸುಬ್ಬಲಕ್ಷ್ಮಿಯವರನ್ನು ಮೂರು ತಿಂಗಳ ಹಿಂದೆ ಪುತ್ರ ಹಾಗೂ ಸೊಸೆ ರಿಕ್ಷಾದಲ್ಲಿ ಸಂಬಂಧಿಕರೊಬ್ಬರ ಮನೆಗೆ ಕಳುಹಿಸಿದ್ದರು. ಅಲ್ಲಿಂದ ಬೇರೆ ಪುತ್ರರು ತನ್ನನ್ನು ಕರೆದೊಯ್ಯಬಹುದೆಂಬ ನಿರೀಕ್ಷೆ ಅವರಲ್ಲಿತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿತ್ತು.


ವಿವಾಹಿತ ಪುತ್ರಿಯರ ಮನೆಯಲ್ಲಿ ಉಳಿಯಲೊಪ್ಪದ ಸುಬ್ಬಲಕ್ಷ್ಮಿ ಪುತ್ರರೊಂದಿಗೆ ಸಂಪರ್ಕ ಸಾಧಿಸಲು ಯತ್ನಿಸಿದರೂ ಅದು ಅಸಾಧ್ಯವಾಗಿದೆ. ಇದರಿಂದ ನೊಂದು ಅವರು ಹಿರಿಯರ ನಾಗರಿಕ ಸಹಾಯವಾಣಿಯ ಮೊರೆ ಹೊಕ್ಕಿದ್ದಾರೆ. ಅವರ ದೂರಿಗೆ ಸ್ಪಂದಿಸಿರುವ ಪೊಲೀಸ್ ಇನ್ ಸ್ಪೆಕ್ಟರ್ ರೇವತಿಯವರು ಸಹಾಯವಾಣಿ ಸಂಯೋಜಕರ ಮೂಲಕ ಸುಬ್ಬಲಕ್ಷ್ಮಿಯವರ ಪುತ್ರರನ್ನು ಸಂಪರ್ಕಿಸಿದ್ದಾರೆ. ಆ ಬಳಿಕ ಅವರಿಗೆ ಎರಡು ವಾರಗಳ ಸಮಯಾವಕಾಶ ನೀಡಿದ್ದರು. ಆದರೆ ವಾರಗಳೆರಡು ಕಳೆದರೂ ಸುಬ್ಬಲಕ್ಷ್ಮಿಯವರನ್ನು ಕರೆದೊಯ್ಯಲು ಯಾವೊಬ್ಬ ಪುತ್ರನೂ ಮುಂದೆ ಬರುತ್ತಲೇ ಇಲ್ಲ‌.

ಬಳಿಕ ಆಕೆಯನ್ನು ಸಹಾಯವಾಣಿ ಸಂಯೋಜಕರು  ಕಾಪಿಕಾಡಿನಲ್ಲಿರುವ ಪುತ್ರನ ಮನೆಗೆ ಪೊಲೀಸರು ಕರೆತಂದರೂ ಮನೆಗೆ ಬೀಗ ಹಾಕಲಾಗಿತ್ತು. ದೂರವಾಣಿ ಮೂಲಕ ಸಂಪರ್ಕಿಸಿದಾಗ ಕರೆ ಸ್ವೀಕರಿಸಿದ ಸೊಸೆ, ಪೊಲೀಸರು ಹಾಗೂ ಸಹಾಯವಾಣಿ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಮುಂದೆ ನಾಲ್ವರು ಪುತ್ರರನ್ನು ಠಾಣೆಗೆ ಕರೆದು ಮಾತುಕತೆ ನಡೆಸುವ ತೀರ್ಮಾರ ಬರಲಾಗಿದೆ. ಅಲ್ಲಿಯೂ ಪ್ರಕರಣ ಇತ್ಯರ್ಥವಾಗದಿದ್ದರೆ 2006ರ ಕಾಯ್ದೆಯಡಿ ದೂರು ದಾಖಲಿಸಿ ಸಹಾಯಕ ಆಯುಕ್ತರ ನೇತೃತ್ವದ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ.

Ads on article

Advertise in articles 1

advertising articles 2

Advertise under the article